ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಆಗಮಿಸಲಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಮೈಸೂರಿಗೆ ಇದು ಎರಡನೇ ಬಾರಿಗೆ ಆಗಮಿಸುತ್ತಿದ್ದಾರೆ. ಕಳೆದ ಬಾರಿ ದಸರಾ ಉದ್ಘಾಟನೆಗೆ ಅವರು ಮೈಸೂರಿಗೆ ಭೇಟಿ ನೀಡಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ನಾಳೆ ಮಧ್ಯಾಹ್ನ 3.20ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ರಾತ್ರಿ 8 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿ ದರ್ಶನ ಪಡೆಯಲಿದ್ದಾರೆ.
ಸೆಪ್ಟೆಂಬರ್ 2ರಂದು ಬೆಳಗ್ಗೆ ರಾಷ್ಟ್ರಪತಿಗಳು ಮೈಸೂರು ಅರಮನೆಗೆ ಭೇಟಿ ನೀಡಿ ಕೆಲಕಾಲ ಅರಮನೆ ವೀಕ್ಷಿಸಲಿದ್ದಾರೆ. ಬಳಿಕ ರಾಜವಂಶದ ಆತಿಥ್ಯ ಸ್ವೀಕರಿಸಿದ ನಂತರ ನೇರವಾಗಿ ಮೈಸೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಮರಳಲಿದ್ದಾರೆ.
ರಾಷ್ಟ್ರಪತಿ ವಾಸ್ತವ್ಯ ಹೂಡಲಿರುವ ಖಾಸಗಿ ಹೋಟೆಲ್ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರಪತಿಗಳ ಸಂಚಾರ ಮಾರ್ಗಗಳ ರಸ್ತೆ ರಿಪೇರಿ ಕೂಡ ಪೂರ್ಣಗೊಂಡಿದೆ. ಆದರೆ ಲಲಿತ್ ಮಹಲ್ ರಸ್ತೆಯ 50ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.