ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ದಿನಗಳ ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಕೇರಳದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿದ್ದರು. ಅವರೊಬ್ಬ ಶ್ರೇಷ್ಠ ರಾಜತಾಂತ್ರಿಕ ಹಾಗೂ ವಿದ್ವಾಂಸರಾಗಿದ್ದರು. ತಮ್ಮ ಹುಟ್ಟೂರಾದ ಕೇರಳದೊಂದಿಗೆ ಕೆ.ಆರ್. ನಾರಾಯಣನ್ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಸಮಾನತೆ, ಸಮಗ್ರತೆ ಹಾಗೂ ಸಾಮಾಜಿಕ ಸೇವೆಗಾಗಿ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ದೇಶದ ರಾಷ್ಟ್ರಪತಿಯಾಗಿ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು ಎಂದರು.
ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣದ ಮಹತ್ವದ ಕುರಿತು ಅರಿತಿದ್ದ ಅವರು, ಶಿಕ್ಷಣ ಎಲ್ಲರ ಹಕ್ಕು ಎಂದು ನಂಬಿದ್ದರು. ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು. ನಂತರ ರಾಷ್ಟ್ರಪತಿ ಅವರು ತಿರುವನಂತಪುರ ಸಮೀಪದ ವರ್ಕಾಲದ ಶಿವಗಿರಿ ಮಠದಲ್ಲಿ ಶ್ರೀನಾರಾಯಣ ಗುರು ಸ್ಮಾರಕ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಆನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲಾದಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜೂಬಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೇರಳದ ರಾಜಭವನದಲ್ಲಿ ರಾಷ್ಟ್ರಪತಿಗಳಿಂದ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಪ್ರತಿಮೆ ಅನಾವರಣ

