ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಇನ್ನೂ 6 ತಿಂಗಳ ಕಾಲ ವಿಸ್ತರಣೆ: ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಿದ ಅಮಿತ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಆಗಸ್ಟ್ 13, 2025 ರಿಂದ ಆರು ತಿಂಗಳಿಗೆ ವಿಸ್ತರಿಸಿದ್ದು, ಫೆಬ್ರವರಿ 13, 2026ರವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಶುಕ್ರವಾರ ರಾಜ್ಯಸಭೆಯಲ್ಲಿ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಾಸನಬದ್ಧ ನಿರ್ಣಯವನ್ನು ಮಂಡಿಸಿದರು.

ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆಯ ಬಳಿಕ, ಫೆಬ್ರವರಿ 13, 2025 ರಂದು ಕೇಂದ್ರವು ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿತ್ತು.

ಮಣಿಪುರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13, 2025 ರಂದು ರಾಷ್ಟ್ರಪತಿಗಳು ಸಂವಿಧಾನದ 356ನೇ ವಿಧಿಯ ಅಡಿಯಲ್ಲಿ ಹೊರಡಿಸಿದ ಘೋಷಣೆಯ ಜಾರಿಯನ್ನು ಆಗಸ್ಟ್ 13, 2025 ರಿಂದ ಜಾರಿಗೆ ಬರುವಂತೆ ಇನ್ನೂ ಆರು ತಿಂಗಳ ಅವಧಿಗೆ ಈ ಸದನವು ಅನುಮೋದಿಸುತ್ತದೆ’ ಎಂದು ರಾಜ್ಯಸಭೆಯ ಸಂಸದೀಯ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಮೇ 28ರಂದು,BJP 8 ಶಾಸಕರು, ಒಬ್ಬ NPP ಶಾಸಕ, ಮತ್ತು ಒಬ್ಬ ಸ್ವತಂತ್ರ ಶಾಸಕ ಸೇರಿದಂತೆ ಸುಮಾರು 10 ಶಾಸಕರು, ಇಂಫಾಲ್‌ನ ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಸಾಧಿಸಿದ್ದರು. ತಿಂಗಳ ಬಳಿಕ 25 BJP ಶಾಸಕರು ಇಂಫಾಲ್‌ನಲ್ಲಿ BJP ಶಾಸಕಿ ಥೊಂಗಂ ಬಿಶ್ವಜಿತ್ ಸಿಂಗ್ ಅವರ ನಿವಾಸದಲ್ಲಿ ಜನಪ್ರಿಯ ಸರ್ಕಾರ ರಚನೆಗೆ ಒತ್ತಾಯಿಸಿದ್ದರು.

ರಾಜಕೀಯ ಅಸ್ಥಿರತೆ ಮತ್ತು ಕಾನೂನು-ಸುವ್ಯವಸ್ಥೆ ಕುರಿತ ಆತಂಕಗಳ ಮಧ್ಯೆ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲರ ವರದಿಯ ಆಧಾರದ ಮೇಲೆ ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದ್ದರು. ಮಣಿಪುರ ವಿಧಾನಸಭೆಯ ಅಧಿಕಾರವನ್ನು ಸಂಸತ್‌ಗೆ ವರ್ಗಾಯಿಸಲಾಗಿದ್ದು, ರಾಜ್ಯ ಸರ್ಕಾರದ ಅಧಿಕಾರವನ್ನು ಅಮಾನತುಗೊಳಿಸಲಾಗಿದೆ.

ಈ ಆದೇಶದಂತೆ, ರಾಜ್ಯಪಾಲರ ಅಧಿಕಾರವನ್ನು ರಾಷ್ಟ್ರಪತಿಯು ವಹಿಸಿಕೊಂಡಿದ್ದಾರೆ ಮತ್ತು ರಾಜ್ಯದ ಶಾಸಕಾಂಗದ ಅಧಿಕಾರವನ್ನು ಸಂಸತ್ ತೆಗೆದುಕೊಂಡಿದೆ. ರಾಜ್ಯದ ಎಲ್ಲಾ ಕಾನೂನುಗಳು ಮತ್ತು ನಿರ್ಧಾರಗಳನ್ನು ಈಗ ಕೇಂದ್ರದ ಅಧಿಕಾರದಡಿ ಸಂಸತ್ ಅಥವಾ ರಾಷ್ಟ್ರಪತಿಯಿಂದ ತೆಗೆದುಕೊಳ್ಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!