Friday, November 7, 2025

ಅಂಗೋಲಾ, ಬೋಟ್ಸ್ವಾನಾ ಗೆ ರಾಷ್ಟ್ರಪತಿ ಭೇಟಿ: ಹೊಸ ದಾಖಲೆ ಬರೆಯಲಿದ್ದಾರೆ ದ್ರೌಪದಿ ಮುರ್ಮು

ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆಯಿಂದ – ಅಂಗೋಲಾ ಮತ್ತು ಬೋಟ್ಸ್ವಾನಾ (Angola ಮತ್ತು Botswana) ಗೆ ಆರು ದಿನಗಳ ಭೇಟಿ ನೀಡಲಿದ್ದಾರೆ.
ಈ ದೇಶಗಳಿಗೆ ಭಾರತದ ಮುಖ್ಯಸ್ಥರು ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಸಂಬಂಧ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸುಧಾಕರ್ ದಲೇಲಾ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿಗಳ ಪ್ರವಾಸದ ಮೊದಲ ಹಂತದಲ್ಲಿ, ನಾಳೆಯಿಂದ 11 ರವರೆಗೆ ಅಂಗೋಲಾಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಅಲ್ಲಿನ ರಾಷ್ಟ್ರಪತಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದರು ಇದೇ11 ರಂದು ಅಂಗೋಲಾದ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಅಂಗೋಲಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತ ಮತ್ತು ಅಂಗೋಲಾ ಈ ವರ್ಷ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 40 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಿದರು.
ಎರಡನೇ ಹಂತದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 11 ರಿಂದ 13 ರವರೆಗೆ ಬೋಟ್ಸ್ವಾನಾಗೆ ಭೇಟಿ ನೀಡಲಿದ್ದಾರೆ. ಬೋಟ್ಸ್ವಾನಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಹೊಸ ಮಾರ್ಗಗಳನ್ನು ಚರ್ಚಿಸಲಿದ್ದಾರೆ. ಇದೇ ವೇಳೆ ಅಲ್ಲಿನ ರಾಷ್ಟ್ರೀಯ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

error: Content is protected !!