ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಾಂಗ ಸಂಬಂಧಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜೋರ್ಡಾನ್‌ನಲ್ಲಿ ಭಾರತೀಯ ಸಮುದಾಯದೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು.
ಅಮ್ಮಾನ್ ನಗರದಲ್ಲಿ ನಡೆದ ಈ ಭೇಟಿಯಲ್ಲಿ ಪ್ರಧಾನಿ ಮೋದಿಯನ್ನು ನೋಡಿದ ಭಾರತೀಯ ವಲಸಿಗರು ಉತ್ಸಾಹಭರಿತರಾಗಿ ಸ್ವಾಗತಿಸಿದರು. ತ್ರಿವರ್ಣ ಧ್ವಜ ಹಿಡಿದು ನಿಂತಿದ್ದ ಮಕ್ಕಳನ್ನು ಪ್ರಧಾನಿ ಹತ್ತಿರಕ್ಕೆ ಕರೆದು ಹಸ್ತಲಾಘವ ಮಾಡಿ, ಅವರೊಂದಿಗೆ ನೆನಪಿನ ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡರು.
ಜೋರ್ಡಾನ್, ಇಥಿಯೋಪಿಯಾ ಹಾಗೂ ಒಮಾನ್ ಒಳಗೊಂಡ ಮೂರು ರಾಷ್ಟ್ರಗಳ ಪ್ರವಾಸವನ್ನು ಪ್ರಧಾನಿ ಮೋದಿ ಆರಂಭಿಸಿದ್ದು, ಇದು ಭಾರತ–ಜೋರ್ಡಾನ್ ದ್ವಿಪಕ್ಷೀಯ ಸಂಬಂಧಗಳಿಗೆ ವಿಶೇಷ ಮಹತ್ವ ಪಡೆದಿದೆ. ಜೋರ್ಡಾನ್ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದ್ದು, ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವರ್ಷದ ಹಿನ್ನೆಲೆಯಲ್ಲಿ ಈ ಪ್ರವಾಸ ಇನ್ನಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

