Saturday, December 20, 2025

ಪ್ರಧಾನಿ ಮೋದಿಯಿಂದ ದೇಶದ ಮೊದಲ ಪ್ರಕೃತಿ ಆಧಾರಿತ ವಿಮಾನ ನಿಲ್ದಾಣ ಟರ್ಮಿನಲ್ ಲೋಕಾರ್ಪಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನ ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.

ಈ ಟರ್ಮಿನಲ್ ಅನ್ನು 4,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಮತ್ತು ಇದು ದೇಶದ ಮೊದಲ ಪ್ರಕೃತಿ-ಆಧಾರಿತ ವಿಮಾನ ನಿಲ್ದಾಣ ಟರ್ಮಿನಲ್ ಆಗಿದೆ.

ಉದ್ಘಾಟನೆಯ ನಂತರ ಪ್ರಧಾನಿ ಟರ್ಮಿನಲ್‌ಗೆ ಭೇಟಿ ನೀಡಿದರು. ವಿಮಾನ ನಿಲ್ದಾಣಕ್ಕೆ ಅಸ್ಸಾಂನ ಮೊದಲ ಮುಖ್ಯಮಂತ್ರಿಯ ಹೆಸರಿಡಲಾಗಿದೆ, ಅವರ 80 ಅಡಿ ಎತ್ತರದ ಪ್ರತಿಮೆಯನ್ನು ವಿಮಾನ ನಿಲ್ದಾಣದ ಹೊರಗೆ ಮೋದಿ ಅನಾವರಣಗೊಳಿಸಿದರು.

ಭಾರತದ ಮೊದಲ ಪ್ರಕೃತಿ-ಆಧಾರಿತ ವಿಮಾನ ನಿಲ್ದಾಣದ ಟರ್ಮಿನಲ್ ಇದಾಗಿದ್ದು, ಇದರ ವಿನ್ಯಾಸವು “ಬ್ಯಾಂಬೂ ಆರ್ಕಿಡ್ಸ್” ಎಂಬ ಪರಿಕಲ್ಪನೆಯ ಅಡಿಯಲ್ಲಿ ಅಸ್ಸಾಂನ ಜೀವವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ.

ಈ ಟರ್ಮಿನಲ್ ನಲ್ಲಿ ಈಶಾನ್ಯ ಭಾರತದ ಸ್ಥಳೀಯ ಸುಮಾರು 140 ಮೆಟ್ರಿಕ್ ಟನ್ ಬಿದಿರನ್ನು ಪ್ರಥಮ ಬಾರಿಗೆ ಬಳಸಲಾಗಿದೆ. ಇದರೊಂದಿಗೆ ಕಾಜಿರಂಗದಿಂದ ಸ್ಫೂರ್ತಿ ಪಡೆದ ಹಸಿರು ಭೂದೃಶ್ಯಗಳು, ಅಸ್ಸಾಂನ ಸಾಂಪ್ರದಾಯಿಕ ‘ಜಾಪಿ’ ಕಲೆಗಳು, ಪ್ರಖ್ಯಾತ ಖಡ್ಗಮೃಗದ ಚಿಹ್ನೆ ಹಾಗೂ ‘ಕೊಪೌ’ ಹೂವನ್ನು ಪ್ರತಿಬಿಂಬಿಸುವ 57 ಆರ್ಕಿಡ್ ಮಾದರಿಯ ಸ್ತಂಭಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಇಲ್ಲಿನ ವಿಶಿಷ್ಟ ಆಕರ್ಷಣೆಯಾದ “ಸ್ಕೈ ಫಾರೆಸ್ಟ್” ಸುಮಾರು ಒಂದು ಲಕ್ಷ ಸ್ಥಳೀಯ ತಳಿಗಳ ಸಸ್ಯಗಳನ್ನು ಹೊಂದಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ದಟ್ಟವಾದ ಕಾಡಿನ ಒಳಗಿರುವಂತಹ ಅದ್ಭುತ ಅನುಭವವನ್ನು ನೀಡುತ್ತದೆ.

ಈ ಟರ್ಮಿನಲ್ ಪ್ರಯಾಣಿಕರ ಸೌಕರ್ಯ ಮತ್ತು ಡಿಜಿಟಲ್ ಆವಿಷ್ಕಾರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ವೇಗವಾದ ಮತ್ತು ಅಡೆತಡೆಯಿಲ್ಲದ ಭದ್ರತಾ ತಪಾಸಣೆಗಾಗಿ ಪೂರ್ಣ ದೇಹದ ಸ್ಕ್ಯಾನರ್ ಗಳು , ಡಿಜಿಯಾತ್ರೆ-ಆಧಾರಿತ ಸಂಪರ್ಕ ರಹಿತ ಪ್ರಯಾಣ, ಸ್ವಯಂಚಾಲಿತ ಲಗೇಜ್ ನಿರ್ವಹಣೆ, ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಮಾನ ನಿಲ್ದಾಣದ ಕಾರ್ಯಾಚರಣೆಗಳಂತಹ ವೈಶಿಷ್ಟ್ಯಗಳು ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ದಕ್ಷ ಪ್ರಯಾಣವನ್ನು ಖಚಿತಪಡಿಸುತ್ತವೆ.

error: Content is protected !!