Sunday, September 7, 2025

ಸೆ.9ರಂದು ಪಂಜಾಬ್ ನ ಪ್ರವಾಹ ಪೀಡಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಒಂದು ತಿಂಗಳಿನಿಂದ ಧಾರಾಕಾರ ಮಳೆಯಿಂದಾಗಿ ಪಂಜಾಬ್ ಸೇರಿ ಉತ್ತರ ಭಾರತದ ಅನೇಕ ರಾಜ್ಯಗಳು ಭಾರೀ ಹಾನಿಗೊಳಗಾಗಿವೆ. ಪ್ರವಾಹದಿಂದ 14 ಜಿಲ್ಲೆಗಳು ತೀವ್ರ ಹಾನಿಗೊಳಗಾಗಿದ್ದು, ಸುಮಾರು 2,000ಕ್ಕೂ ಹೆಚ್ಚು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದಾಗಿ 46 ಜನರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 9ರಂದು ಪಂಜಾಬ್‌ನ ಗುರುದಾಸ್ಪುರಕ್ಕೆ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿ ಅವರು ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ, ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲಿದ್ದಾರೆ. ಜೊತೆಗೆ ಪೀಡಿತರನ್ನು ನೇರವಾಗಿ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುವ ನಿರೀಕ್ಷೆಯಿದೆ. ರಾಜ್ಯ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, “ಪ್ರಧಾನಿ ಮೋದಿ ಪಂಜಾಬ್ ಜನರೊಂದಿಗಿದ್ದಾರೆ, ಕಷ್ಟಕಾಲದಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರ ಸದಾ ಸಿದ್ಧವಾಗಿದೆ” ಎಂದು ತಿಳಿಸಿದೆ.

ಮೂಲಗಳ ಪ್ರಕಾರ, ಈ ಭೇಟಿಯ ಸಂದರ್ಭದಲ್ಲಿ ಪಂಜಾಬ್‌ಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ. ಪ್ರವಾಹದಿಂದ ಉಂಟಾದ ಆರ್ಥಿಕ ನಷ್ಟವನ್ನು ಪೂರೈಸಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆಯಿದೆ.

ಇದನ್ನೂ ಓದಿ