ಹೊಸ ದಿಗಂತ ವರದಿ, ಮಂಗಳೂರು:
ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿ ನೀಡುವ ಕಾರಣದಿಂದ ಜಿಲ್ಲೆಯ ಮೂರು ಠಾಣಾ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಉಡುಪಿ ನಗರ ಠಾಣೆ, ಮಲ್ಪೆ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಉಡುಪಿ ಡಿಸಿ ಸ್ವರೂಪ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಕಾರಣಗಳಿಂದ ಹಲವು ಮಾರ್ಗಗಳನ್ನು ಬಂದ್ ಮಾಡಲಾಗುತ್ತದೆ. ಇದರಿಂದ ಶಾಲಾ ಮಕ್ಕಳ ಸಂಚಾರಕ್ಕೆ ತೊಡಕಾಗುವ ಸಾಧ್ಯತೆ ಇದೆ. ಸುರಕ್ಷತೆ, ಭದ್ರತೆ -ಶಿಷ್ಟಾಚಾರ ಪಾಲಿಸುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ.
ಉಡುಪಿಯಲ್ಲಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುವ ಹಿನ್ನಲೆಯಲ್ಲಿ ಎಸ್‌ಪಿಜಿ ಭದ್ರತಾ ಪಡೆ ಉಡುಪಿಯಲ್ಲಿ ಬೀಡು ಬಿಟ್ಟಿದೆ. ಬಿಗಿ ಭದ್ರತೆ ಕೈಗೊಂಡಿದೆ. ನವೆಂಬರ್ 28ರಂದು ಬೆಳಗ್ಗೆ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಉಡುಪಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ವಿಶೇಷ ವಿಮಾನ ಲ್ಯಾಂಡ್ ಆಗಲಿದೆ. ಬಳಿಕ ಮಂಗಳೂರಿನಿಂದ ಉಡುಪಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. 11:45 ರ ಸುಮಾರಿಗೆ ಉಡುಪಿಗೆ ಆಗಮಿಸಲಿದ್ದಾರೆ. 12 ಗಂಟೆಗೆ ಉಡುಪಿ ಕೃಷ್ಣ ಮಠಕ್ಕೆ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಉಡುಪಿ ಶ್ರೀ ಕೃಷ್ಣನ ದರುಶನ ಮಾಡಲಿರುವ ಮೋದಿ ಬಳಿಕ ಸುವರ್ಣತೀರ್ಥ ಮಂಟಪ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಕನಕನ ಕಿಂಡಿಗೆ ಸ್ವರ್ಣ ಕವಚ ಲೋಕಾರ್ಪಣೆ ಮಾಡಲಿದ್ದಾರೆ. 12.15ರಿಂದ 1.15ರ ವರೆಗೆ ಲಕ್ಷ ಕಂಠ ಗೀತಾ ಪಠಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲ್ಲಿದ್ದಾರೆ. ಉಡುಪಿ ಕಾರ್ಯಕ್ರಮ ಮುಗಿಸಿದ ಬಳಿಕ ಮಧ್ಯಾಹ್ನ 1.45ಕ್ಕೆ ಉಡುಪಿಯಿಂದ ಮಂಗಳೂರಿಗೆ ತೆರಳಲಿದ್ದಾರೆ.

