ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಇಂದು ಐತಿಹಾಸಿಕ ಕ್ಷಣ. ಸಿಲಿಕಾನ್ ಸಿಟಿ ನಿವಾಸಿಗಳ ಬಹುಕಾಲದ ನಿರೀಕ್ಷೆಯಾದ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10:30ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿ, ಮೊದಲು ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ರೈಲು ಸಹ ಸೇರಿದೆ. ನಂತರ 11:50ಕ್ಕೆ ಆರ್‌ವಿ ರಸ್ತೆ–ಬೊಮ್ಮಸಂದ್ರ ನಡುವೆ ನಿರ್ಮಿತ 5,057 ಕೋಟಿ ರೂಪಾಯಿ ವೆಚ್ಚದ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಉದ್ಘಾಟನೆಯ ಬಳಿಕ ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮೆಟ್ರೋ ಪ್ರಯಾಣ ಮಾಡಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ:
10:30 – ದೆಹಲಿಯಿಂದ ಬೆಂಗಳೂರಿಗೆ ಆಗಮನ (ಹೆಚ್‌ಎಎಲ್ ವಿಮಾನ ನಿಲ್ದಾಣ)
10:55 – ಎಂಐ-17 ಹೆಲಿಕಾಪ್ಟರ್ ಮೂಲಕ ಮೇಖ್ರಿ ಸರ್ಕಲ್ ಸೇನಾ ಕಚೇರಿ ಹೆಲಿಪ್ಯಾಡ್‌ಗೆ ಆಗಮನ
11:00 – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ 3 ವಂದೇ ಭಾರತ್ ರೈಲುಗಳಿಗೆ ಚಾಲನೆ
11:45 – ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಹಳದಿ ಮಾರ್ಗ ಉದ್ಘಾಟನೆ, ನಂತರ ಎಲೆಕ್ಟ್ರಾನಿಕ್ ಸಿಟಿವರೆಗೆ ಮೆಟ್ರೋ ಪ್ರಯಾಣ
12:55 – ಎಲೆಕ್ಟ್ರಾನಿಕ್ ಸಿಟಿ ಐಐಟಿ ಆಡಿಟೋರಿಯಂನಲ್ಲಿ ಕಾರ್ಯಕ್ರಮ, ಕಿತ್ತಳೆ ಮತ್ತು ಬೂದು ಮಾರ್ಗದ ಮೆಟ್ರೋ ಹಂತಗಳಿಗೆ ಶಂಕುಸ್ಥಾಪನೆ
02:15 – ಮೇಖ್ರಿ ಸರ್ಕಲ್ ಹೆಲಿಪ್ಯಾಡ್‌ಗೆ ಆಗಮನ
02:40 – ಹೆಚ್‌ಎಎಲ್ ಮೂಲಕ ದೆಹಲಿಗೆ ನಿರ್ಗಮನ
ಸಂಚಾರ ಬದಲಾವಣೆಗಳು:
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2:30ರವರೆಗೆ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಬನ್ನೇರುಘಟ್ಟ ರಸ್ತೆ, ಜಿಗಣಿ ಮಾರ್ಗ, ಹೊಸೂರು ರಸ್ತೆ ಮುಂತಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಾರಿಗೆ ಇಲಾಖೆ ವಿನಂತಿಸಿದೆ.
ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಹಸಿರು ಮಾರ್ಗದ ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆರ್‌ವಿ ರಸ್ತೆ ನಿಲ್ದಾಣಗಳು ತಾತ್ಕಾಲಿಕವಾಗಿ ಮುಚ್ಚಲಾಗುತ್ತವೆ ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ನಗರದ ವಿವಿಧ ವೃತ್ತಗಳಲ್ಲಿ ಸಾವಿರಾರು ಕಾರ್ಯಕರ್ತರು ಪ್ರಧಾನಿ ಮೋದಿ ಸ್ವಾಗತಕ್ಕೆ ತಯಾರಾಗಿದ್ದಾರೆ. ಚಾಲುಕ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್ ಎಂಡ್ ವೃತ್ತ, ರಾಗಿಗುಡ್ಡ ಮತ್ತು ಎಲೆಕ್ಟ್ರಾನಿಕ್ ಸಿಟಿ ವೃತ್ತಗಳಲ್ಲಿ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಪ್ರಧಾನಿಗಾಗಿ ಕಾಯುತ್ತಿದ್ದಾರೆ.