Wednesday, September 3, 2025

SCO ಶೃಂಗಸಭೆಯ ಅಧಿವೇಶನ ಉದ್ದೇಶಿಸಿ ಇಂದು ಪ್ರಧಾನಿ ಭಾಷಣ, ಪುಟಿನ್‌ ಜೊತೆ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಯ ಒಂದು ದಿನದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ 25 ನೇ ಶಾಂಘೈ ಸಹಕಾರ ಸಂಸ್ಥೆ ಮುಖ್ಯಸ್ಥರ ಮಂಡಳಿಯ ಶೃಂಗಸಭೆಯ ಸಮಗ್ರ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಬಳಿಕ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ಹಾಗೂ ವಿಶ್ವದ ಗಮನ ಸೆಳೆಯುವ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು SCO ಸಮಗ್ರ ಅಧಿವೇಶನದಲ್ಲಿ ಮಾಡಿದ ಭಾಷಣದ ನಂತರ ಪ್ರಧಾನಿ ರಷ್ಯಾದ ಅಧ್ಯಕ್ಷರನ್ನು ಸಹ ಭೇಟಿಯಾಗಲಿದ್ದಾರೆ ಎಂದು ದೃಢಪಡಿಸಿದ್ದಾರೆ.

ಪ್ರಧಾನಿಯವರು ಶೃಂಗಸಭೆಯ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಅವರು SCO ಶೃಂಗದ ಅಡಿ ಪ್ರಾದೇಶಿಕ ಸಹಕಾರವನ್ನು ಬೆಳೆಸುವ ಭಾರತದ ಪ್ರಯತ್ನವನ್ನು ವಿವರಿಸುತ್ತಾರೆ. ಈ ಭಾಷಣದ ಬಳಿಕ ಅವರು, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ನಂತರ ಅವರು ಭಾರತಕ್ಕೆ ವಾಪಸ್​ ಆಗಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಭಾನುವಾರ ಮಾಹಿತಿ ನೀಡಿದ್ದಾರೆ.

ರಷ್ಯಾ ಕಚ್ಚಾ ತೈಲ ಖರೀದಿ ಕಡಿಮೆ ಮಾಡುವಂತೆ ಟ್ರಂಪ್ ಆಡಳಿತದಿಂದ ಭಾರತ ಒತ್ತಡ ಎದುರಿಸುತ್ತಿರುವ ಸಮಯದಲ್ಲಿ ಈ ಸಭೆ ನಡೆಯುವುದರಿಂದ ಇದು ಭಾರಿ ಮಹತ್ವ ಪಡೆದುಕೊಂಡಿದೆ. ಅಮೆರಿಕ ಅಧ್ಯಕ್ಷರು ಭಾರತೀಯ ಉತ್ಪನ್ನಗಳ ಮೇಲೆ ಶೇ 50% ಸುಂಕವನ್ನು ವಿಧಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಸುಂಕವು ಭಾರತವು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ದಂಡವಾಗಿದೆ.

ಅದೇ ಸಮಯದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ಹೊರತಾಗಿಯೂ ಉಕ್ರೇನ್‌ನಲ್ಲಿ ಯುದ್ಧ ಮುಂದುವರೆದಿರುವುದರಿಂದ ಈ ಸಭೆಯು ನಿರ್ಣಾಯಕವಾಗಿದೆ. ಆಗಸ್ಟ್ 30 ರಂದು ಉಕ್ರೇನ್ ಸಂಘರ್ಷದ ಶಾಂತಿಯುತ ಇತ್ಯರ್ಥಕ್ಕಾಗಿ ಭಾರತ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ದೂರವಾಣಿ ಕರೆಯಲ್ಲಿ ತಿಳಿಸಿದ್ದರು.

ಮೋದಿ ಇಂದು ಪುಟಿನ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಲು ನಿರ್ಧರಿಸಿರುವುದರಿಂದ ರಷ್ಯಾ – ಉಕ್ರೇನ್​ ಸಂಘರ್ಷವು ಮಾತುಕತೆಯ ಪ್ರಮುಖ ಅಂಶಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಝೆಲೆನ್ಸ್ಕಿ ಮೋದಿಗೆ ಕರೆ ಮಾಡಿ ರಷ್ಯಾದ ಉನ್ನತ ನಾಯಕತ್ವದೊಂದಿಗೆ ಸಭೆಗೆ ತಮ್ಮ ಸಿದ್ಧತೆಯ ಬಗ್ಗೆ ತಿಳಿಸಿದ್ದರು. ಯುದ್ಧದ ಅಂತ್ಯವು ತಕ್ಷಣದ ಕದನ ವಿರಾಮದೊಂದಿಗೆ ಪ್ರಾರಂಭವಾಗಬೇಕು ಎಂದೂ ಅವರು ತಿಳಿಸಿದ್ದರು.

ಇದನ್ನೂ ಓದಿ