ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಇಂದು ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಗಂಭೀರ ಕಾದಾಟ ನಡೆದಿದೆ. ತಂಬಾಕು ಮತ್ತು ಇತರ ಮಾದಕ ವಸ್ತುಗಳ ಬಳಕೆಯನ್ನು ನಿರ್ಬಂಧಿಸಲು ಯತ್ನಿಸಿದ ಮೂವರು ಜೈಲು ಸಿಬ್ಬಂದಿ ಮತ್ತು ಜೈಲರ್ ಮೇಲೆ ಕೈದಿಗಳು ಹಲ್ಲೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣವೇ ನಗರ ಠಾಣೆಯ ಪೊಲೀಸರು ಕ್ಷಿಪ್ರವಾಗಿ ಜೈಲಿಗೆ ಧಾವಿಸಿದ್ದು, 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ.
ದಾಳಿ ನಡೆಸಿದ ಕೈದಿಗಳನ್ನು ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಮತ್ತು ಕೌಶಿಕ್ ನಿಹಾಲ್ ಎಂದು ಗುರುತಿಸಲಾಗಿದೆ.
ಈ ಮೂವರಲ್ಲಿ ಆರೋಪಿ ಫಯಾನ್‌ನ ಹಿನ್ನೆಲೆ ಆತಂಕಕಾರಿಯಾಗಿದೆ. ಈತ ಈ ಹಿಂದೆ ಮಂಗಳೂರು ಜೈಲಿನಲ್ಲಿದ್ದಾಗಲೂ ಇದೇ ರೀತಿಯ ಘಟನೆ ನಡೆಸಿದ್ದ. ಅಂದು ಮೊಬೈಲ್ ಮತ್ತು ತಂಬಾಕು ವಶಪಡಿಸಿಕೊಂಡಿದ್ದಕ್ಕೆ ಕೋಪಗೊಂಡು, ಆಗಿನ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಇದೀಗ ಮತ್ತೆ ಕಾರವಾರ ಜೈಲಿನಲ್ಲಿ ತಂಬಾಕು ಸಿಗದಿದ್ದಕ್ಕೆ ಜೈಲರ್ ಮತ್ತು ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಕಾರಾಗೃಹದ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪೊಲೀಸರ ಮಧ್ಯಪ್ರವೇಶದಿಂದ ಯಾವುದೇ ಅನಾಹುತವಾಗದೆ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಗಾಯಗೊಂಡ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೈಲಿನೊಳಗೆ ಮಾದಕ ವಸ್ತುಗಳ ಬಳಕೆಯನ್ನು ತಡೆಯುವಲ್ಲಿನ ಸವಾಲು ಮತ್ತು ಪುನರಾವರ್ತಿತ ಅಪರಾಧ ಎಸಗುವ ಕೈದಿಗಳ ವರ್ತನೆಯು ಜೈಲು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

