ಹೊಸದಿಗಂತ ವರದಿ ಹುಬ್ಬಳ್ಳಿ:
ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯಲು ಹಾಗೂ ಮುಂದಿನ ಮುಖ್ಯಮಂತ್ರಿಯಾಗುವ ಅಭಿಲಾಷೆಯಿಂದ ಆರ್.ಎಸ್.ಎಸ್ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನಿರುದ್ಯೋಗ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಅವರ ಕ್ಷೇತ್ರ ಕಲಬುರಗಿಯ ಸಮಸ್ಯೆಗಳು ಅವರಿಗೆ ಕಾಣುತ್ತಿಲ್ಲ ಎಂದು ಸಂಸದ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆ ತಿಳಿಸಿದ ಅವರು, ಮೊದಲು ಅವರು ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಒಳ್ಳೆಯದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಮಾತನಾಡುವ ಮೊದಲು ದೇಶಕ್ಕಾಗಿ ಆರ್.ಎಸ್.ಎಸ್ ಮಾಡಿದ ಸೇವೆಗಳ ಕುರಿತು ಮಾಹಿತಿ ಕಲೆ ಹಾಕಬೇಕಿತ್ತು. ದೇಶದ ಒಳಿತಿಗಾಗಿ ಆರ್.ಎಸ್.ಎಸ್ ಮಾಡಿದ ಅಸಾಧಾರಣ ಸೇವೆಗಳ ಕುರಿತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗಿತ್ತು.
ಸಂಘದ ಕುರಿತು ಅವರಿಗಿರುವ ಕುತೂಹಲವನ್ನು ಕಲಬುರಗಿಯ ಅಭಿವೃದ್ಧಿಯ ಕಡೆ ಹರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ಮತ್ತಿತರರು ಇದನ್ನೇ ಮಾಡಲು ಹೋಗಿ ಕೈ ಸುಟ್ಟುಕೊಂಡ ಇತಿಹಾಸ ಗೊತ್ತಿಲ್ಲದೆ ಮತ್ತೊಮ್ಮೆ ಇದೇ ಕೃತ್ಯ ಮಾಡಲು ಹೊರಟಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಆದ್ದರಿಂದ ಪ್ರಿಯಾಂಕ್ ಖರ್ಗೆ ಅವರಿಗೂ ಸಹ ಇತಿಹಾಸ ಕಹಿಯಾದ ಪಾಠವನ್ನೇ ಕಲಿಸಲಿದೆ. ಅದನ್ನು ನಮ್ಮ ಕಣ್ಣೆದುರಿಗೇ ನಾವೆಲ್ಲರೂ ನೋಡಲಿದ್ದೇವೆ ಎಂದು ಹೇಳಿದರು. ಅಧಿಕಾರದ ಆಸೆಯ ಬೆನ್ನು ಹತ್ತಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆಯಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಳ – ಅಗಲ ಗೊತ್ತಿಲ್ಲದೆ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

