ಹೊಸದಿಗಂತ ಡಿಜಿಟಲ್ ಡೆಸ್ಕ್:ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತನ್ನ ಅಭಿಯಾನವನ್ನು ವೀರೋಚಿತ ಹೋರಾಟದೊಂದಿಗೆ ಪ್ರಾರಂಭಿಸಿದರೂ, ಜಯದ ದಾರಿಯಲ್ಲಿ ಹಿನ್ನಡೆ ಸಾಧಿಸಿದೆ. ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಬುಲ್ಸ್ ತಂಡ ಟೈ ಬ್ರೇಕರ್‌ನಲ್ಲಿ ಸೋಲು ಅನುಭವಿಸಿತು. 40 ನಿಮಿಷಗಳ ಆಟ ಮುಗಿದಾಗ ಎರಡೂ ತಂಡಗಳು 32-32 ಅಂಕಗಳಲ್ಲಿ ಸಮಬಲ ಸಾಧಿಸಿದ ಕಾರಣ, ಫಲಿತಾಂಶ ನಿರ್ಧಾರಕ್ಕಾಗಿ ಟೈ ಬ್ರೇಕರ್‌ಗೆ ಮೊರೆ ಹೋಗಲಾಯಿತು.
ಟೈ ಬ್ರೇಕರ್‌ನಲ್ಲಿ ಉಭಯ ತಂಡಗಳಿಗೆ ತಲಾ ಐದು ರೈಡ್ ಅವಕಾಶ ನೀಡಲಾಯಿತು. ನಿರ್ಣಾಯಕ ಕ್ಷಣದಲ್ಲಿ ಬುಲ್ಸ್ ಪರ ತಾರಾ ರೈಡರ್ ಆಕಾಶ್ ಶಿಂಧೆ ಔಟಾಗಿದ್ದು ತಂಡಕ್ಕೆ ಹಿನ್ನಡೆ ತಂದಿತು. ಬಳಿಕ ಕೊನೆಯ ರೈಡ್‌ನಲ್ಲಿಯೂ ಅಂಕ ಗಳಿಸಲು ವಿಫಲವಾದ ಬುಲ್ಸ್, 6-4 ಅಂತರದಲ್ಲಿ ಸೋಲು ಕಂಡಿತು.
ಬೆಂಗಳೂರು ಬುಲ್ಸ್ ಪರ ಆಕಾಶ್ ಶಿಂಧೆ ಮಿಂಚಿ 10 ರೈಡ್‌ಗಳಿಂದ ಎರಡು ಬೋನಸ್ ಹಾಗೂ 10 ಟಚ್ ಪಾಯಿಂಟ್ ಸೇರಿ ಒಟ್ಟು 12 ಅಂಕ ಗಳಿಸಿದರು. ಅಶೀಶ್ ಮಲಿಕ್ ಕೂಡಾ 8 ಅಂಕಗಳನ್ನು ಕಬಳಿಸಿ ತಂಡಕ್ಕೆ ಕೊಡುಗೆ ನೀಡಿದರು. ಪುಣೇರಿ ಪಲ್ಟನ್ ಪರ ಆಧಿತ್ಯ ಶಿಂಧೆ 9 ಅಂಕ ಮತ್ತು ಪಂಕಜ್ ಮೋಹಿತೆ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದೇ ದಿನದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ತಮಿಳ್ ತಲೈವಾಸ್ 38-35 ಅಂಕಗಳಲ್ಲಿ ಗೆಲುವು ಸಾಧಿಸಿತು. ಅಂತಿಮ ಕ್ಷಣಗಳಲ್ಲಿ ಪವನ್ ಶೆರಾವತ್ ದಾಖಲಿಸಿದ ಸೂಪರ್ ರೈಡ್ ತಮಿಳ್ ತಲೈವಾಸ್‌ಗೆ ಜಯದ ಬಾಗಿಲು ತೆರೆದಿತು.