ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಟುಂಬದೊಳಗಿನ ಆಸ್ತಿ ವಿವಾದ ಒಂದು ಯುವಕನ ಜೀವ ಕಸಿದುಕೊಂಡಿರುವ ಹೃದಯವಿದ್ರಾವಕ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಸಹೋದರನೇ ತನ್ನ ಮಕ್ಕಳೊಂದಿಗೆ ಸೇರಿ ತಮ್ಮನನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ.
ಯೋಗೇಶ್ (30) ಎಂಬ ಯುವಕ ಮೃತಪಟ್ಟಿದ್ದು, ಆತನ ಅಣ್ಣ ಲಿಂಗರಾಜು ಹಾಗೂ ಲಿಂಗರಾಜು ಅವರ ಪುತ್ರರಾದ ಭರತ್ ಮತ್ತು ದರ್ಶನ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಯೋಗೇಶ್ ಮೇಲೆ ಸುಮಾರು 28 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯ ಬಳಿಕ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಲಿಂಗರಾಜು ಮತ್ತು ಯೋಗೇಶ್ ನಡುವೆ ಹಲವು ವರ್ಷಗಳಿಂದ ಆಸ್ತಿ ಸಂಬಂಧಿತ ಕಲಹ ಮುಂದುವರಿದಿತ್ತು. ಈ ವಿಚಾರವಾಗಿ ಆಗಾಗ ಮನೆಮಧ್ಯೆ ಗಲಾಟೆಗಳು ನಡೆಯುತ್ತಿದ್ದವು. ಇದೇ ವೈಮನಸ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯೋಗೇಶ್ ಅವರ ಮದುವೆ ಇದೇ ತಿಂಗಳ 21ರಂದು ನಿಗದಿಯಾಗಿದ್ದುದರಿಂದ. ಮದುವೆ ಆಹ್ವಾನ ಪತ್ರಿಕೆಯಲ್ಲಿ ಅಣ್ಣನ ಹೆಸರನ್ನೂ ಸೇರಿಸಿ ಊರಿನವರಿಗೆ ಹಂಚಿದ್ದ ಯೋಗೇಶ್, ಅದೇ ಅಣ್ಣನ ಕೈಯಿಂದ ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ಈ ಘಟನೆ ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.


