ಹೊಸದಿಗಂತ ವರದಿ ವಿಟ್ಲ:
ಲಂಚ ಪಡೆಯುವ ಸಂದರ್ಭ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಫೀಸ್ ಅವರನ್ನು ವಜಾಗೊಳಿಸುವಂತೆ ಮತ್ತು ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಪೆರುವಾಯಿ ಗ್ರಾಮಸ್ಥರಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಧಾನ ಸೌಧದಿಂದ ಗ್ರಾಮ ಸೌಧದ ತನಕ ಭ್ರಷ್ಟಾಚಾರ ಇದೆ ಎಂಬುದನ್ನು ಗಮನಿಸಬಹುದು. ಆಡಳಿತ ಬರಬೇಕಾದರೆ ಬಿಜೆಪಿ ಸರ್ಕಾರ ಶೇ.40 ಸರ್ಕಾರ ಎಂದರು. ಈಗ ಶೇ.100ರ ಸರ್ಕಾರ ಇದೆ ಎಂಬುದನ್ನು ಪೆರುವಾಯಿ ಅಧ್ಯಕ್ಷರು ತೋರಿಸಿದ್ದಾರೆ. ಭ್ರಷ್ಟಾಚಾರವನ್ನು ಯಾವ ರೀತಿ ನಡೆಸಬಹುದೆಂಬುದಕ್ಕೆ ತರಬೇತಿಯನ್ನು ಪೆರುವಾಯಿಯಲ್ಲಿ ಪಡೆದುಕೊಳ್ಳಬಹುದು. ಕರ್ನಾಟಕದಲ್ಲಿ ಜನ ಅಭಿವೃದ್ಧಿಯಿಲ್ಲದೆ, ಗುಂಡಿ ರಸ್ತೆಯಲ್ಲಿ ಓಡಾಡುವ ಸ್ಥಿತಿಯಿದೆ ಎಂದರು.
ಜಾಗರಣ ವೇದಿಕೆಯ ಮುಂಖಡ ನರಸಿಂಹ ಮಾಣಿ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳ ಜತೆಗೆ ಸೇರಿಕೊಂಡು ಅಧ್ಯಕ್ಷರು ನುಂಗಿ 14ದಿನ ನ್ಯಾಯಾಂಗ ಬಂಧನ ಅನುಭವಿಸಿದ್ದಾರೆ. ಬಡವರ ಕಲ್ಯಾಣಕ್ಕಾಗಿ ನೀಡಿದ ಹಣವನ್ನು ತಿನ್ನುವಷ್ಟು ಸಮಸ್ಯೆಯಿದ್ದರೆ ತಿಳಿಸಬಹುದಿತ್ತು. ಲಕ್ಷಾಂತರ ಅವ್ಯವಹಾರದ ನಡೆಸಲು ಪಿಡಿಓ ರುವಾರಿಯಾಗಿದ್ದು, ಬಂಟ್ವಾಳ ಇಓ ಅವರನ್ನು ಅಮಾನತ್ತು ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಹಾಕಿದ ಸಿಸಿಟಿವಿಗಳ ಸಂಪರ್ಕವನ್ನು ಅಧ್ಯಕ್ಷರ ಮೊಬೈಲ್ ಗೆ ನೀಡಿದ್ದು, ತಕ್ಷಣ ಸ್ಥಗಿತ ಮಾಡಬೇಕು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದರು.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಮಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು. ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಆಗಮಿಸಿದರಾದರೂ, ಅವರ ಮೇಲೆಯೇ ಆರೋಪ ಮಾಡಿ ಪ್ರತಿಭಟನೆಯನ್ನು ನಡೆಸಿದ ಕಾರಣ ಅವರು ಮನವಿ ಸ್ವೀಕರಿಸುವುದಿಲ್ಲ ಎಂದರು. ಬಳಿಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನವಿಯನ್ನು ಸ್ವೀಕರಿಸಿದರು.
ಭಾಜಪ ಪುತ್ತೂರು ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಹರಿಪ್ರಸಾದ್ ಯಾದವ್, ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ವಿಶ್ವ ಹಿಂದು ಪರಿಷತ್ ಪ್ರಮುಖ್ ಅಶೋಕ್ ಮಾಣಿಲ, ಪ್ರಮುಖರಾದ ಗಣೇಶ್ ಭಟ್, ಅಜಿತ್ ಭಟ್, ಮನೀಷ್, ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಯರಾಮ ಆಳ್ವ ಬದಿಯಾರು ಸ್ವಾಗತಿಸಿದರು. ಯತೀಶ್ ಪೆರುವಾಯಿ ಪ್ರಸ್ತಾವನೆಗೈದರು. ಮೋಕ್ಷಿತ್ ಪೆರುವಾಯಿ ವಂದಿಸಿದರು.

