ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನಲ್ಲಿ ದಿನೇದಿನೇ ತೀವ್ರಗೊಳ್ಳುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಹೊಸ ತಿರುವು ಪಡೆದಿವೆ. ದೇಶಾದ್ಯಂತ ಭುಗಿಲೆದ್ದಿರುವ ಖಮೇನಿ ಆಡಳಿತ ವಿರೋಧಿ ಆಕ್ರೋಶದ ನಡುವೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕನಿಗೆ ಮರಣದಂಡನೆ ವಿಧಿಸಲು ಇರಾನ್ ಸರ್ಕಾರ ಸಿದ್ಧತೆ ನಡೆಸಿದೆ. ಇದು ಇತ್ತೀಚಿನ ಪ್ರತಿಭಟನೆಗಳ ಬಳಿಕ ಜಾರಿಗೆ ತರಲಾಗುತ್ತಿರುವ ಮೊದಲ ಗಲ್ಲು ಶಿಕ್ಷೆ ಎನ್ನಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, 26 ವರ್ಷದ ಎರ್ಫಾನ್ ಸೋಲ್ಟಾನಿ ಎಂಬ ಯುವಕನಿಗೆ ಗಲ್ಲು ಶಿಕ್ಷೆ ವಿಧಿಸಲು ಆಡಳಿತ ನಿರ್ಧರಿಸಿದ್ದು, ಇದರ ಅಧಿಕೃತ ಘೋಷಣೆ ಜನವರಿ 14ರಂದು ಹೊರಬೀಳುವ ಸಾಧ್ಯತೆ ಇದೆ. ಟೆಹ್ರಾನ್ ಸಮೀಪದ ಕರಾಜ್ ಉಪನಗರದ ಫರ್ಡಿಸ್ ನಿವಾಸಿಯಾಗಿರುವ ಸೋಲ್ಟಾನಿಯನ್ನು, ಜನವರಿ 8ರಂದು ರಾಷ್ಟ್ರವ್ಯಾಪಿ ನಡೆದ ಖಮೇನಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು.
ಆರ್ಥಿಕ ಸಂಕಷ್ಟದಿಂದ ಆರಂಭವಾದ ಈ ಪ್ರತಿಭಟನೆಗಳು, ಕೆಲವೇ ದಿನಗಳಲ್ಲಿ ಆಡಳಿತ ವಿರೋಧಿ ಮಹಾ ಚಳವಳಿಯಾಗಿ ವಿಸ್ತರಿಸಿವೆ. ಜನವರಿ ಆರಂಭದಿಂದಲೇ ಹಲವು ನಗರಗಳಲ್ಲಿ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾನವ ಹಕ್ಕುಗಳ ಸಂಘಟನೆಗಳ ಮಾಹಿತಿ ಪ್ರಕಾರ, ಈ ಪ್ರತಿಭಟನೆಗಳಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಸೋಲ್ಟಾನಿಗೆ ಬಂಧನದ ಬಳಿಕ ಕಾನೂನು ಸಲಹೆಗಾರರನ್ನು ಸಂಪರ್ಕಿಸುವ ಅವಕಾಶ ನೀಡಲಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕುಟುಂಬಕ್ಕೂ ಪ್ರಕರಣದ ವಿವರಗಳನ್ನು ಸಮಯಕ್ಕೆ ತಿಳಿಸಿಲ್ಲ ಎಂದು ವರದಿಗಳು ಹೇಳುತ್ತಿವೆ. ಆಡಳಿತದ ವಿರುದ್ಧ ಮುಂದುವರಿಯುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಇಂತಹ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.


