ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ಅರಣ್ಯ ಇಲಾಖೆ ಬೇಸರದ ಸುದ್ದಿಯೊಂದನ್ನು ನೀಡಿದೆ. ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಕಾಡ್ಗಿಚ್ಚಿನ ಭೀತಿಯಿಂದಾಗಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿರುವ 11 ಪ್ರಮುಖ ಚಾರಣ ಪಥಗಳಿಗೆ (ಟ್ರಕ್ಕಿಂಗ್ ಮಾರ್ಗಗಳಿಗೆ) ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ) ಹೊರಡಿಸಿರುವ ಆದೇಶದ ಪ್ರಕಾರ, ದಿನಾಂಕ 14-01-2026 ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಈ ನಿಷೇಧ ಹೇರಲಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಹಾಗೂ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ‘ಬೆಂಕಿ ಕಾಲ’ ಸಮೀಪಿಸುತ್ತಿದೆ. ಅರಣ್ಯದಲ್ಲಿ ಒಣಗಿದ ಹುಲ್ಲು ಮತ್ತು ಎಲೆಗಳು ಹೆಚ್ಚಾಗಿರುವುದರಿಂದ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಗಂಗಡಿಕಲ್ ಚಾರಣ, ಕುದುರೆಮುಖ ಚಾರಣ, ಕುರಿಂಜಾಲು ಚಾರಣ, ವಾಲಿಕುಂಜ ಚಾರಣ – ಎಸ್. ಕೆ. ಬಾರ್ಡರ್, ವಾಲಿಕುಂಜ ಚಾರಣ – ಕೆರ್ವಾಶೆ, ನರಸಿಂಹ ಪರ್ವತ – ಕಿಗ್ಗ, ನರಸಿಂಹ ಪರ್ವತ – ಮಳಂದೂರು, ಕೊಡಚಾದ್ರಿ – ವಳೂರು, ಕೊಡಚಾದ್ರಿ – ಹಿಡ್ಲುಮನೆ, ಬಂಡಾಜೆ – ವೊಳಂಬ್ರ, ನೇತ್ರಾವತಿ ಚಾರಣಕ್ಕೆ ಅವಕಾಶ ಇಲ್ಲ.


