ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಹರಾನ್‌ನಲ್ಲಿ ಆರಂಭವಾದ ಬೆಲೆ ಏರಿಕೆ ಮತ್ತು ಹಣದುಬ್ಬರ ವಿರೋಧಿ ಆಕ್ರೋಶ ಈಗ ಇಡೀ ಇರಾನ್‌ನ್ನೇ ಆವರಿಸಿದೆ. ಆರಂಭದಲ್ಲಿ ಸಣ್ಣ ಮಟ್ಟದಲ್ಲಿದ್ದ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರಗೊಂಡು, ಇದೀಗ ಆಡಳಿತದ ವಿರುದ್ಧ ನೇರ ಬಂಡಾಯದ ರೂಪ ಪಡೆದುಕೊಂಡಿವೆ. ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ನೇತೃತ್ವದ ಸರ್ಕಾರದ ವಿರುದ್ಧ ಬೀದಿಗಿಳಿದ ಜನರು, ದೇಶದಾದ್ಯಂತ ಅಸಾಧಾರಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇರಾನ್ ವಿದೇಶಾಂಗ ಸಚಿವರ ಹೇಳಿಕೆಯಂತೆ, ಪ್ರತಿಭಟನಾಕಾರರು 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸಾಮಾನ್ಯವಾಗಿ ಇರಾನಿನ ಜನರು ಮಸೀದಿಗಳಿಗೆ ಕೈಹಾಕುವುದಿಲ್ಲ, ಆದರೆ ಈಗಿನ ಪರಿಸ್ಥಿತಿ ಅಸಾಮಾನ್ಯವಾಗಿದೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ.
ರಾಜಧಾನಿ ಟೆಹರಾನ್, ಮಶಾದ್ ಸೇರಿದಂತೆ ದೇಶದ ಎಲ್ಲಾ 31 ಪ್ರಾಂತ್ಯಗಳಲ್ಲಿ ಪ್ರತಿಭಟನೆಗಳು ವ್ಯಾಪಕವಾಗಿದ್ದು, 100ಕ್ಕೂ ಹೆಚ್ಚು ನಗರಗಳಿಗೆ ಹರಡಿವೆ. ವಿದ್ಯುತ್ ಹಾಗೂ ಇಂಟರ್ನೆಟ್ ಕಡಿತದಂತಹ ಕ್ರಮಗಳ ಮೂಲಕ ಸರ್ಕಾರ ಪ್ರತಿಭಟನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ, ಜನರು ಹಿಂದೆ ಸರಿಯುತ್ತಿಲ್ಲ.
ಪ್ರಮುಖ ನಗರಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಉದ್ಯೋಗ ಕೊರತೆ, ಜೀವನ ವೆಚ್ಚದ ಏರಿಕೆ ಮತ್ತು ಆಡಳಿತದ ಕಠಿಣ ಧಾರ್ಮಿಕ ನೀತಿಗಳ ವಿರುದ್ಧ ಜನರು ಬೀದಿಗಿಳಿದಿದ್ದಾರೆ. 47 ವರ್ಷಗಳ ಇಸ್ಲಾಮಿಕ್ ಗಣರಾಜ್ಯದ ಇತಿಹಾಸದಲ್ಲೇ ಇದು ಅತಿದೊಡ್ಡ ಆಡಳಿತ ವಿರೋಧಿ ಚಳವಳಿಯೆಂದು ವಿಶ್ಲೇಷಿಸಲಾಗುತ್ತಿದೆ.
ಈ ಬೆಳವಣಿಗೆಗಳ ನಡುವೆ, ಸರ್ಕಾರ ಪತನದ ಸಾಧ್ಯತೆಗಳ ಕುರಿತು ಚರ್ಚೆಗಳು ಜೋರಾಗಿದ್ದು, ಪರಿಸ್ಥಿತಿ ಯಾವ ದಿಕ್ಕಿಗೆ ಸಾಗಲಿದೆ ಎಂಬುದು ಜಾಗತಿಕ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.


