Wednesday, January 14, 2026
Wednesday, January 14, 2026
spot_img

ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗುತ್ತಿದ್ದ ‘ಮದವೇರಿದ’ ಚಾಲಕನಿಗೆ ಸಾರ್ವಜನಿಕರಿಂದ ಧರ್ಮದೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯದ ಅಮಲಿನಲ್ಲಿ ಲಾರಿ ಚಾಲಕನೊಬ್ಬ ನಡೆಸಿದ ಅಟ್ಟಹಾಸಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಲಾರಿಯನ್ನು ಅಡ್ಡಾದಿಡ್ಡಿ ಚಲಾಯಿಸಿದ ಚಾಲಕ, ರಸ್ತೆಯಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಎಸಗಿದ ಬಳಿಕ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಹಿಡಿಯಲು ಪೊಲೀಸರು ಮುಂದಾಗಿದ್ದರು. ಪೊಲೀಸರಿಂದ ಬರೋಬ್ಬರಿ 14 ಕಿಲೋಮೀಟರ್‌ಗಳಷ್ಟು ದೂರ ತಪ್ಪಿಸಿಕೊಂಡು ಹೋದ ಈ ‘ಕಿಲರ್ ಲಾರಿ’, ಅಂತಿಮವಾಗಿ ಚಂದಾಪುರದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದೆ.

ಚಾಲಕನ ಬೇಜವಾಬ್ದಾರಿತನದಿಂದ ಆಕ್ರೋಶಗೊಂಡ ಸ್ಥಳೀಯರು, ಚಂದಾಪುರದ ಬಳಿ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಲಕನನ್ನು ಸಾರ್ವಜನಿಕರಿಂದ ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Most Read

error: Content is protected !!