March 18, 2026
Wednesday, March 18, 2026
spot_img

ಪ್ಯಾಲೇಸ್ ಗ್ರೌಂಡ್‌ನಲ್ಲಿ ‘ರೆಡ್ ಹ್ಯಾಂಡ್’ ಆಗಿ ಸಿಕ್ಕಿಬಿದ್ದ ಪಲ್ಸರ್ ಬಾಬು: 19 ಪ್ರಕರಣಗಳ ಕಿಂಗ್‌ಪಿನ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಸಮಾರಂಭಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಅಂತರಜಿಲ್ಲಾ ಕಳ್ಳ ‘ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು ಸದಾಶಿವನಗರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ಮದುವೆಯೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಪೊಲೀಸರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಿಗೆ ನುಗ್ಗುತ್ತಿದ್ದ ಈ ಖತರ್ನಾಕ್ ಕಳ್ಳ, ಮದುವೆಯ ಸಂಭ್ರಮದಲ್ಲಿರುವ ಜನರ ಗಮನ ಬೇರೆಡೆ ಇರುವುದನ್ನು ಬಳಸಿಕೊಳ್ಳುತ್ತಿದ್ದ. ಅದರಲ್ಲೂ ಪ್ರಮುಖವಾಗಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು, ಅವರ ಮೈಮೇಲಿದ್ದ ಚಿನ್ನಾಭರಣ ಹಾಗೂ ಮೊಬೈಲ್‌ಗಳನ್ನು ದೋಚುತ್ತಿದ್ದ. ಕೇವಲ ಒಡವೆ ಮಾತ್ರವಲ್ಲದೆ, ಮದುವೆ ಮನೆಯಲ್ಲಿದ್ದ ಕ್ಯಾಮೆರಾ, ಲ್ಯಾಪ್‌ಟಾಪ್ ಮತ್ತು ಬೈಕ್‌ಗಳನ್ನು ಕಳವು ಮಾಡುವುದರಲ್ಲಿ ಈತ ನಿಸ್ಸೀಮನಾಗಿದ್ದ.

ತನಿಖೆಯ ವೇಳೆ ಈತ ಬರೋಬ್ಬರಿ 19 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಕೊರೊನಾ ಸಮಯದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ 2,000 ಕೈದಿಗಳಲ್ಲಿ ಈತನೂ ಒಬ್ಬನಾಗಿದ್ದ. ಆದರೆ ಜೈಲಿನಿಂದ ಹೊರಬಂದ ಮೇಲೂ ಈತ ತನ್ನ ಹಳೆಯ ಚಾಳಿ ಮುಂದುವರಿಸಿದ್ದ. ಕದ್ದ ಚಿನ್ನವನ್ನು ಕರಗಿಸಿ ತನಗಾಗಿ ವಿಶೇಷವಾದ ತಿರುಪತಿ ಲಾಕೆಟ್ ಮತ್ತು ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಕಳ್ಳತನದ ಹಣದಿಂದ ಕಾರುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.

ಸದ್ಯ ಆರೋಪಿಯಿಂದ ಪೊಲೀಸರು ಭಾರಿ ಪ್ರಮಾಣದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ:

ಸುಮಾರು 42.38 ಲಕ್ಷ ರೂಪಾಯಿ.

2 ಐಷಾರಾಮಿ ಕಾರುಗಳು, 132 ಗ್ರಾಂ ಚಿನ್ನ, 7 ಮೊಬೈಲ್‌ಗಳು, 1 ಪ್ರೊಫೆಷನಲ್ ಕ್ಯಾಮೆರಾ ಮತ್ತು 2 ಲೆನ್ಸ್‌ಗಳು, 2 ಲ್ಯಾಪ್‌ಟಾಪ್‌ಗಳು, 4 ಬೈಕ್‌ಗಳು ಹಾಗೂ 1.20 ಲಕ್ಷ ನಗದು.

ಈ ಕಾರ್ಯಾಚರಣೆಯಿಂದ ಸದಾಶಿವನಗರ, ವರ್ತೂರು, ಜಾಲಹಳ್ಳಿ, ಹೆಣ್ಣೂರು ಮತ್ತು ಬಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 8 ಪ್ರಮುಖ ಪ್ರಕರಣಗಳು ಸುಖಾಂತ್ಯ ಕಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !