ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಈಗ ತೆರೆದ ಗದ್ದಲದ ಹಂತಕ್ಕೆ ತಲುಪಿದೆ. ಈ ಪರಿಸ್ಥಿತಿ ಬರಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಊಹಿಸಿದ್ದರೂ, ಇಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕಾದ ಅತೀವ ಅನಿವಾರ್ಯತೆ ಎದುರಾಗಿದೆ. ಗದ್ದುಗೆ ಗುದ್ದಾಟ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿರುವುದರಿಂದ, ಹೈಕಮಾಂಡ್ ಇದೀಗ ಕಟ್ಟುನಿಟ್ಟಿನ ತೀರ್ಮಾನಕ್ಕೆ ಬರುವ ಒತ್ತಡದಲ್ಲಿದೆ.
ಈ ನಡುವೆ, ಡಿಕೆಶಿ ಪರ ಬಣದ ಚಟುವಟಿಕೆಗಳು ದೆಹಲಿಯಲ್ಲೂ ಬಿರುಸು ಪಡೆದುಕೊಂಡಿದ್ದು, ಪಕ್ಷದ ಕೇಂದ್ರ ನಾಯಕರಿಗೆ ಮತ್ತಷ್ಟು ತಲೆನೋವನ್ನು ತಂದಿವೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ, ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಗಳೂರಿಗೆ ಕಳುಹಿಸಿ ವಿವಾದವನ್ನು ತಣಿಸುವ ಯತ್ನ ನಡೆದಿದೆ. ಆದರೆ, ಮಾತುಕತೆ ಫಲಿಸುತ್ತಿರುವ ಸಾಧ್ಯತೆಗಳು ಕಡಿಮೆಯಾಗಿ ಕಾಣುತ್ತಿವೆ.
ಕುರ್ಚಿ ಕದನಕ್ಕೆ ಮತ್ತೊಂದು ಅನಿರೀಕ್ಷಿತ ತಿರುವಾಗಿ, ಕಾಶಿಯಿಂದ ಬಂದ ನಾಗ ಸಾಧುಗಳು ಡಿಕೆ ಶಿವಕುಮಾರ್‌ರನ್ನು ಭೇಟಿಯಾಗಿ ಅವರಿಗೆ ವಿಶೇಷ ಆಶೀರ್ವಾದ ನೀಡಿದ್ದಾರೆ. ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಸಾಧುಗಳು ಡಿಕೆಶಿ ತಲೆಯ ಮೇಲೆ ಕೈ ಇಟ್ಟು “ಅವರು ಮುಖ್ಯಮಂತ್ರಿ ಆಗಲಿ” ಎಂದು ಆಶೀರ್ವಾದ ನೀಡಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

