Friday, December 5, 2025

ಪುಟಿನ್‌ ಭಾರತ ಯಾತ್ರೆ: ರಾಜ್‌ಘಾಟ್‌ನಲ್ಲಿ ಗಾಂಧೀಜಿಗೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಪ್ರವಾಸ ಇಂದು ಆತ್ಮೀಯ ಹಾಗೂ ಗೌರವಯುತ ವಾತಾವರಣದಲ್ಲಿ ಮುಂದುವರಿಯಿತು. ಅಧಿಕೃತ ಸ್ವಾಗತ ಸಮಾರಂಭ ಮುಗಿದ ಕೆಲವೇ ಕ್ಷಣಗಳಲ್ಲಿ ಅವರು ನೇರವಾಗಿ ರಾಜ್‌ಘಾಟ್ ಕಡೆಗೆ ಪ್ರಯಾಣ ಮಾಡಿ, ಮಹಾತ್ಮಾ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು. ಶಾಂತಿ ಮತ್ತು ಅಹಿಂಸೆಯ ಚಿಹ್ನೆಯಾಗಿರುವ ಗಾಂಧೀಜಿ ಸ್ಮಾರಕದಲ್ಲಿ ಪುಟಿನ್ ಅವರ ಭೇಟಿ ಎರಡೂ ರಾಷ್ಟ್ರಗಳ ಐತಿಹಾಸಿಕ ಬಾಂಧವ್ಯಕ್ಕೆ ಮತ್ತೊಂದು ಸಂಕೇತವಾಗಿ ಕಾಣಿಸಿತು.

ರಾಜ್‌ಘಾಟ್ ಪ್ರವೇಶಿಸಿದ ಪುಟಿನ್ ಅವರನ್ನು ವಿದೇಶಾಂಗ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಪುಟಿನ್ ರಷ್ಯಾ ಧ್ವಜದ ಬಣ್ಣಗಳಿಂದ ಅಲಂಕರಿಸಲಾದ ಪುಷ್ಪಚಕ್ರವನ್ನು ಸಮಾಧಿಯಲ್ಲಿ ಇಟ್ಟು ಗೌರವ ಸಲ್ಲಿಸಿದರು. ಬಳಿಕ ಅವರಿಂದ ಗುಲಾಬಿ ದಳಗಳ ಅರ್ಪಣೆ ನಡೆಯಿತು. ಸಮಾಧಿಯಿಂದ ಹೊರಡುವ ಮೊದಲು ಅವರು ಭೇಟಿ ಸ್ಮರಣಾರ್ಥ ಅಭಿಪ್ರಾಯ ಪುಸ್ತಕದಲ್ಲೂ ತಮ್ಮ ಸಂದೇಶವನ್ನು ದಾಖಲಿಸಿದರು.

ಇದರ ಮೊದಲು ರಾಷ್ಟ್ರಪತಿ ಭವನದಲ್ಲಿ ಪುಟಿನ್ ಅವರಿಗೆ ತ್ರಿ-ಸೇನಾಪಡೆಗಳ ಗೌರವ ವಂದನೆ ಸಲ್ಲಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಔಪಚಾರಿಕ ಸ್ವಾಗತ ನೀಡಿ, ಇಬ್ಬರು ದೇಶಗಳ ಅಧಿಕಾರಿಗಳೊಂದಿಗೆ ಪರಿಚಯ ಸಭೆ ನಡೆಸಿದರು. ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ ಬಳಿಕ ಪುಟಿನ್ ಅವರ ಪ್ರವಾಸದ ಮುಂದಿನ ಹಂತವಾಗಿ ರಾಜ್‌ಘಾಟ್ ಭೇಟಿ ನಡೆದಿದೆ.

error: Content is protected !!