Wednesday, November 26, 2025

ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆ ಬಗ್ಗೆ ಮತ್ತೆ ಪ್ರಶ್ನೆ: ಕರುಣ್ ನಾಯರ್ ಪೋಸ್ಟ್‌ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುವಾಹಟಿ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ನೀಡಿದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ತಂಡದ ಆಯ್ಕೆ ಪ್ರಕ್ರಿಯೆ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿದ ಪರಿಣಾಮ, ಆಯ್ಕೆ ಸಮಿತಿಯ ತೀರ್ಮಾನಗಳ ಬಗ್ಗೆ ಗಂಭೀರ ಪ್ರಶ್ನೆಗಳು ತಲೆ ಎತ್ತಿವೆ. ಇದೇ ಸಂದರ್ಭದಲ್ಲಿ ಕನ್ನಡಿಗ ಕರುಣ್ ನಾಯರ್ ಹಂಚಿಕೊಂಡ ಸಾಮಾಜಿಕ ಜಾಲತಾಣದ ಪೋಸ್ಟ್ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಟೆಸ್ಟ್ ತಂಡದಿಂದ ಹೊರಗುಳಿದ ಬಳಿಕ, ನಾಯರ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾ “ಕೆಲವು ಸನ್ನಿವೇಶಗಳ ಭಾವನೆ ಹೃದಯದಲ್ಲಿ ಆಳವಾಗಿ ಬೇರೂರಿದೆ, ಆದರೆ ಹೊರಗುಳಿದಾಗ ಮೌನವೇ ಹೆಚ್ಚು ನೋವು ಕೊಡುತ್ತದೆ” ಎಂದು ಬರೆದಿದ್ದರು. ಈ ಪೋಸ್ಟ್ ಅನ್ನು ಅಭಿಮಾನಿಗಳು ಆಯ್ಕೆ ಪ್ರಕ್ರಿಯೆಯ ಮೇಲಿನ ಅವರ ಅಸಮಾಧಾನದ ಸೂಚನೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸಕ್ಕೆ ಕರೆಸಲ್ಪಟ್ಟ ನಾಯರ್ ಅವರನ್ನು ಮತ್ತೆ ಕೈಬಿಟ್ಟಿದ್ದರು.

ರಣಜಿ ಟ್ರೋಫಿಯಲ್ಲಿ ಐದು ಪಂದ್ಯಗಳಲ್ಲಿ 600ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿ ಅದ್ಭುತ ಫಾರ್ಮ್ ತೋರಿದ್ದರೂ, ದಕ್ಷಿಣ ಆಫ್ರಿಕಾ ಟೆಸ್ಟ್‌ಗಳಿಗೆ ನಾಯರ್ ಗೆ ಅವಕಾಶ ಸಿಗದಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

error: Content is protected !!