ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯಲ್ಲಿ ದಿನೇದಿನೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೊಂದಿಗೆ ಸಿಎನ್‌ಜಿ ಬಳಕೆಯೂ ವೇಗವಾಗಿ ವೃದ್ಧಿಯಾಗುತ್ತಿದೆ. ಇಂಧನ ವೆಚ್ಚ ಕಡಿಮೆ ಹಾಗೂ ಮೈಲೇಜ್ ಹೆಚ್ಚು ಎಂಬ ಕಾರಣಕ್ಕೆ ಆಟೋ, ಟ್ಯಾಕ್ಸಿ, ಕಾರು ಹಾಗೂ ಬೈಕ್‌ಗಳಲ್ಲಿ ಸಿಎನ್‌ಜಿ ಜನಪ್ರಿಯವಾಗುತ್ತಿದೆ. ಆದರೆ ನಗರದಲ್ಲಿ ಸಿಎನ್‌ಜಿ ಬಂಕ್‌ಗಳ ಕೊರತೆ ಇದೀಗ ವಾಹನ ಸವಾರರಿಗೆ ದೊಡ್ಡ ತಲೆನೋವಾಗುತ್ತಿದೆ.
ಬೆಂಗಳೂರು ನಗರದಲ್ಲಿ ಸುಮಾರು ಎರಡು ಲಕ್ಷ ಆಟೋಗಳಿದ್ದು, ಇತ್ತೀಚಿನ ಬಹುತೇಕ ಆಟೋಗಳು ಸಿಎನ್‌ಜಿ ಆಧಾರಿತವಾಗಿವೆ. ಇದಕ್ಕೆ ಜೊತೆಯಾಗಿ ಸಾವಿರಾರು ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳೂ ಸಿಎನ್‌ಜಿ ಬಳಕೆ ಮಾಡುತ್ತಿವೆ. ಆದರೆ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಕೇವಲ 77 ಮಾತ್ರ. ಅವುಗಳಲ್ಲೂ ಹೆಚ್ಚಿನವು ನಗರದ ಹೊರವಲಯದಲ್ಲೇ ಇರುವುದರಿಂದ, ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಹಲವು ಕಿಲೋಮೀಟರ್ ದೂರ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಲೈಟ್ ಡಿನ್ನರ್ ಆಪ್ಷನ್ ಹುಡುಕ್ತಿದ್ದೀರಾ? ಈ ಸಿಂಪಲ್ ಪೀನಟ್ ಸಲಾಡ್ ಟ್ರೈ ಮಾಡಿ
ನಗರದ ಒಳಭಾಗದಲ್ಲಿರುವ ಕೆಲವೇ ಬಂಕ್‌ಗಳ ಮುಂದೆ ಗಂಟೆಗಟ್ಟಲೇ ಸಾಲುಗಳು ಕಾಣಿಸುತ್ತಿವೆ. ಪರಿಣಾಮ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಹೆಚ್ಚಾಗಿದೆ. ಚಳಿಗಾಲದ ಹಿನ್ನೆಲೆಯಲ್ಲಿ ಉತ್ತಮ ಪ್ರೆಶರ್ ಇರುವ ಬಂಕ್‌ಗಳತ್ತ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಈ ಪರಿಸ್ಥಿತಿಗೆ ಪರಿಹಾರವಾಗಿ ನಗರದಲ್ಲಿ ಹೆಚ್ಚಿನ ಸಿಎನ್‌ಜಿ ಬಂಕ್‌ಗಳನ್ನು ಆರಂಭಿಸಬೇಕೆಂದು ಆಟೋ ಸಂಘಟನೆಗಳು ಹಾಗೂ ವಾಹನ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

