Friday, November 7, 2025

RCB ಫ್ರಾಂಚೈಸಿ ಖರೀದಿಸೋಕೆ ಕ್ಯೂ! ಯಾರ ಕೈ ಸೇರ್ತಾಳೆ ಭಾಗ್ಯಲಕ್ಷ್ಮಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-19 ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದೆ. ಡಿಯಾಜಿಯೋ ಕಂಪೆನಿ ತನ್ನ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ತೀರ್ಮಾನಿಸಿದ್ದು, ಈಗ ಹಲವು ಬೃಹತ್ ಕಂಪೆನಿಗಳು ಅದಕ್ಕಾಗಿ ಕಣಕ್ಕಿಳಿದಿವೆ.

ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರ JSW ಗ್ರೂಪ್ ಪ್ರಮುಖ ಸ್ಪರ್ಧಿಯಾಗಿದೆ. ಪ್ರಸ್ತುತ JSW ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ 50 ಶೇಕಡಾ ಪಾಲು ಹೊಂದಿದ್ದು, ಆರ್‌ಸಿಬಿ ಖರೀದಿಯಲ್ಲಿ ಯಶಸ್ವಿಯಾದರೆ ಡೆಲ್ಲಿ ಕ್ಯಾಪಿಟಲ್ಸ್‌ನ ಪಾಲನ್ನು ಮಾರಾಟ ಮಾಡಲು ಸಿದ್ಧವಾಗಿದೆ. ಐಪಿಎಲ್ ನಿಯಮದ ಪ್ರಕಾರ ಒಂದೇ ಕಂಪೆನಿಗೆ ಎರಡು ತಂಡಗಳ ಮಾಲೀಕತ್ವ ಇರಲು ಅವಕಾಶವಿಲ್ಲ.

ಇದರ ಮಧ್ಯೆ, ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಸಹ ಕಣಕ್ಕಿಳಿದಿದ್ದು, ಈ ಹಿಂದಿನಿಂದಲೂ ಐಪಿಎಲ್ ಫ್ರಾಂಚೈಸಿ ಖರೀದಿಸಲು ಪ್ರಯತ್ನಿಸುತ್ತಿದೆ. ಈ ಬಾರಿ ಆರ್‌ಸಿಬಿ ಮೂಲಕ ಟೂರ್ನಿಗೆ ಪ್ರವೇಶಿಸಲು ಅದು ತಂತ್ರ ರೂಪಿಸುತ್ತಿದೆ.

ಇನ್ನೊಂದೆಡೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲ ಕೂಡ ಡಿಯಾಜಿಯೋ ಕಂಪೆನಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಒಪ್ಪಂದ ಯಶಸ್ವಿಯಾದರೆ ಆರ್‌ಸಿಬಿ ಫ್ರಾಂಚೈಸಿ ಪುಣೆ ಮೂಲದ ಉದ್ಯಮಿಯ ಕೈಗೆ ಹೋಗಲಿದೆ.

ದೇವಯಾನಿ ಇಂಟರ್‌ನ್ಯಾಷನಲ್ ಗ್ರೂಪ್ ಮತ್ತು ಅಮೆರಿಕಾದ ಖಾಸಗಿ ಹೂಡಿಕೆ ಕಂಪೆನಿಯೂ ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿದ್ದು, ಒಟ್ಟಾರೆ ಐದು ಕಂಪೆನಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿವೆ. ಇವರಲ್ಲಿ ಯಾರಾದರೂ ಇಬ್ಬರು ಅಂತಿಮವಾಗಿ ಹೊಸ ಮಾಲೀಕರಾಗುವ ಸಾಧ್ಯತೆ ಹೆಚ್ಚಾಗಿದೆ.

ಐಪಿಎಲ್ 2026 ಮುನ್ನ ಈ ಬದಲಾವಣೆ ಅಧಿಕೃತವಾಗುವ ನಿರೀಕ್ಷೆ ಇದ್ದು, ಹೊಸ ಮಾಲೀಕರು ಯಾರು ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಕುತೂಹಲದ ಕೇಂದ್ರವಾಗಿದೆ.

error: Content is protected !!