ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಪ್ರಮುಖ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ವರ್ಷದ ಚುನಾವಣಾ ದಿನಾಂಕ ನಿಗದಿಯಾಗಿದೆ. ಇತ್ತೀಚೆಗೆ ಅಂದರೆ, ಅಕ್ಟೋಬರ್ 30 ರಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಚುನಾವಣೆಯನ್ನು ಡಿಸೆಂಬರ್ 20 ರಂದು ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಈ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ಪ್ರಾಥಮಿಕ ಮಾತುಕತೆ ನಡೆದಿದ್ದು, ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಪ್ರಮುಖ ಸ್ಥಾನಗಳಿಗೆ ಚುನಾವಣೆ:
ಪ್ರತಿ ವರ್ಷದಂತೆ ಈ ಬಾರಿಯೂ ಅಧ್ಯಕ್ಷಸ್ಥಾನ, ಉಪಾಧ್ಯಕ್ಷ ಸ್ಥಾನ, ಕಾರ್ಯದರ್ಶಿ ಹಾಗೂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಲಯಗಳ ಪ್ರಕಾರ ವಿತರಕ ವಲಯ, ಪ್ರದರ್ಶಕರ ವಲಯಗಳಿಗೂ ಚುನಾವಣೆ ಇರುತ್ತದೆ.
ನಿರ್ಮಾಪಕ ವಲಯದಿಂದ ಪೈಪೋಟಿ:
ಈ ವರ್ಷ ನಿರ್ಮಾಪಕ ಸಂಘದಿಂದ ಅಧ್ಯಕ್ಷರಾಗಲು ಅವಕಾಶ ಲಭಿಸಿರುವ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ತೀವ್ರ ಪೈಪೋಟಿ ಇರಲಿದೆ. ಹಿರಿಯ ನಿರ್ಮಾಪಕ ಮತ್ತು ಮಾಜಿ ಅಧ್ಯಕ್ಷ ಸಾರಾ ಗೋವಿಂದು ಸೇರಿದಂತೆ ಹಲವು ಪ್ರಮುಖರು ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 14 ರಂದು ನಡೆದ ಚುನಾವಣೆಯಲ್ಲಿ ಪ್ರದರ್ಶಕ ವಲಯದಿಂದ ಎಂ. ನರಸಿಂಹಲು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ, ನೂತನ ಸಮಿತಿಯ ಆಯ್ಕೆಗಾಗಿ ಡಿಸೆಂಬರ್ 20 ರ ದಿನಾಂಕ ಫಿಕ್ಸ್ ಮಾಡಲಾಗಿದೆ.

 
                                    