ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಛಟ್ ಪೂಜಾ ದೇಶದಾದ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಬಿಹಾರದಲ್ಲಿ ಈ ಹಬ್ಬವು ಅತ್ಯಂತ ವಿಶೇಷವಾಗಿ ಆಚರಿಸಲ್ಪಡುತ್ತಿದ್ದು, ನಾಯಕರು, ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದ ಮೂಲಕ ಜನತೆಗೆ ಶುಭಾಶಯ ಕೋರುತ್ತಿದ್ದಾರೆ. ಈ ಸಾಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸೇರಿದ್ದು, ಛಟ್ ಪೂಜಾ ಆಚರಿಸುತ್ತಿರುವ ಜನತೆಗೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಆದರೆ, ಅವರ ಈ ಟ್ವೀಟ್ ಈಗ ರಾಜಕೀಯ ವಿವಾದಕ್ಕೆ ತಿರುಗಿದೆ.
ರಾಹುಲ್ ಗಾಂಧಿಯು ಟ್ವೀಟ್‌ನಲ್ಲಿ, “ಅದ್ಭುತ ಮತ್ತು ಪವಿತ್ರ ಛಟ್ ಪೂಜಾ ಹಬ್ಬಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳು. ಈ ಹಬ್ಬವು ನಿಮ್ಮ ಜೀವನದಲ್ಲಿ ಶಾಂತಿ, ಆರೋಗ್ಯ ಮತ್ತು ಸಂಪತ್ತು ತರಲಿ” ಎಂದು ಬರೆದಿದ್ದರು. ಜೊತೆಗೆ ಅವರು ಛಟ್ ಪೂಜೆಯ ಚಿತ್ರವೊಂದನ್ನು ಸಹ ಹಂಚಿಕೊಂಡಿದ್ದರು.
ಆದರೆ ಬಿಜೆಪಿ ನಾಯಕರು ರಾಹುಲ್ ಗಾಂಧಿಯ ಈ ಪೋಸ್ಟ್‌ನ್ನು “ಕಾಪಿ ಪೇಸ್ಟ್ ಟ್ವೀಟ್” ಎಂದು ಟೀಕಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ರಾಹುಲ್ ಗಾಂಧಿಯು ಕಳೆದ ವರ್ಷ ಮಾಡಿದ ಅದೇ ಟ್ವೀಟ್ ಮತ್ತು ಚಿತ್ರವನ್ನು ಈ ವರ್ಷ ಮತ್ತೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮಿತ್ ಮಾಳವಿಯಾ ಅವರ ಪ್ರಕಾರ, “ರಾಹುಲ್ ಗಾಂಧಿ ಬಿಹಾರ ಜನರ ಧಾರ್ಮಿಕ ಭಾವನೆಗಳಿಗೆ ಗೌರವ ತೋರದೆ ಕೇವಲ ಚುನಾವಣಾ ಉದ್ದೇಶಕ್ಕಾಗಿ ಹಳೆಯ ಪೋಸ್ಟ್‌ನ್ನು ಕಾಪಿ ಪೇಸ್ಟ್ ಮಾಡಿದ್ದಾರೆ. ಹೀಗೆ ಮಾಡಿದದ್ದು ಬಿಹಾರ ಜನತೆಗೆ ಅಪಮಾನವಾಗಿದೆ,” ಎಂದು ಹೇಳಿದ್ದಾರೆ.

