March 23, 2026
Monday, March 23, 2026
spot_img

ಅಕ್ರಮಗಳ ಕರಾಳ‌ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದ ರಾಹುಲ್‌ ಗಾಂಧಿ: ಸಿಎಂ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹರಿಯಾಣದಲ್ಲಿ ಬಿಜೆಪಿ ಹೇಗೆ ಬಹುಮತ ಪಡೆದು ಹರಿಯಾಣದಲ್ಲಿ ಅಧಿಕಾರ ಹಿಡಿಯಿತು ಅನ್ನೋ ಅನುಮಾನಕ್ಕೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಇಂದು ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಹುಲ್‌ ಗಾಂಧಿಯ ಪತ್ರಿಕಾಗೋಷ್ಠಿಯ ಫೋಟೋಗಳನ್ನು ಪೋಸ್ಟ್‌ ಮಾಡಿ ಟ್ವೀಟ್‌ ಮಾಡಿರುವ ಕರ್ನಾಟಕ ಸಿಎಂ ಸಿದ್ದರಾಮಯ್ಯ,’ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖವನ್ನು ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಮೊದಲು ಕರ್ನಾಟಕದ ಮಹದೇವಪುರ, ನಂತರ ಅಳಂದ ವಿಧಾನಸಭಾ ಮತಗಳ್ಳತನವನ್ನು ಬಯಲು ಮಾಡಿದ್ದರು, ಇಂದು ಹರಿಯಾಣ ರಾಜ್ಯದ ಇಡೀ ಚುನಾವಣಾ ಫಲಿತಾಂಶವನ್ನೇ ಹೇಗೆ ಬುಡಮೇಲು ಮಾಡಿದ್ದಾರೆ ಎಂಬುದನ್ನು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ. ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆಯ ಮೂಲಕ ಪ್ರಜಾತಂತ್ರದ ರಕ್ಷಣೆಯ ಮಾಡಬೇಕಿರುವ ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಜೊತೆಗೂಡಿ ಹೇಗೆ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿ ಎಂದು ಬರೆದಿದ್ದಾರೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯರ ಹೆಸರುಗಳನ್ನಷ್ಟೇ ಬಳಸಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಬಿಜೆಪಿ ಮತ್ತು ಚುನಾವಣಾ ಆಯೋಗ, ಹರಿಯಾಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬ್ರೆಜಿಲ್‌ನ ರೂಪದರ್ಶಿಯ ಗುರುತನ್ನು ಕೂಡ ತನ್ನ ಮತಗಳ್ಳತನಕ್ಕೆ ಬಳಕೆ ಮಾಡಿಕೊಂಡಿರುವುದು ಅವರ ನಿರ್ಲಜ್ಜತನಕ್ಕೆ ಸಾಕ್ಷಿ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನ ಹೋಗುವುದು ಗ್ಯಾರಂಟಿ. 5 ಲಕ್ಷಕ್ಕೂ ಅಧಿಕ ನಕಲಿ ಮತದಾರರು, ತಿರುಚಿದ ಅಥವಾ ಗುರುತಿಸಲು ಸಾಧ್ಯವಾಗದಂತಹ ಫೋಟೊ ಬಳಸಿ 1 ಲಕ್ಷಕ್ಕೂ ಅಧಿಕ ಮತಗಳನ್ನು ಕಳವು ಮಾಡಲಾಗಿದೆ. ಹೀಗೆ ಒಟ್ಟು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆ. ಅಂದರೆ ಹರಿಯಾಣದಲ್ಲಿ ಮತ ಚಲಾಯಿಸಿದ ಪ್ರತಿ 8 ಜನರ ಪೈಕಿ‌ ಒಂದು ನಕಲಿ‌ ಮತ ಎನ್ನುವುದು ಸ್ಪಷ್ಟ ಎಂದು ಹೇಳಿದರು.

ದೇಶದ ಬಹುತೇಕ ಚುನಾವಣಾ ಸಮೀಕ್ಷೆಗಳು ಹರಿಯಾಣದಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎನ್ನುವ ಭವಿಷ್ಯ ನುಡಿದಿದ್ದರೂ, ಹರಿಯಾಣದ ಜನ ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲೇಬೇಕು ಎಂಬ ದೃಢ ಸಂಕಲ್ಪ ಮಾಡಿದರೂ ಬಿಜೆಪಿ ಹೇಗೆ ಬಹುಮತ ಪಡೆದು ಸರ್ಕಾರ ರಚಿಸಿತು ಎನ್ನುವ ಅನುಮಾನಕ್ಕೆ ರಾಹುಲ್ ಗಾಂಧಿಯವರು ಉತ್ತರ ನೀಡಿದ್ದಾರೆ.

ತಮ್ಮ ಮೇಲಿನ ಆರೋಪಗಳಿಗೆ ಹಾರಿಕೆ ಉತ್ತರ ನೀಡಿ ಪಲಾಯನ ಮಾಡುತ್ತಿದ್ದ, ಆರೋಪ ಮಾಡಿದವರನ್ನೇ ಪ್ರಮಾಣ ಮಾಡಿ ಎಂದು ಅಸಂಬದ್ಧವಾಗಿ ಮಾತನಾಡುತ್ತಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಬಾರಿಯಾದರೂ “ತನ್ನ ಮಾಲೀಕರ” ರಕ್ಷಣೆಯ ದುಸ್ಸಾಹಸಕ್ಕೆ ಕೈಹಾಕದೆ ಸತ್ಯ ಒಪ್ಪಿಕೊಂಡು, ಮಾಡಿದ ಪಾಪಗಳಿಗೆ ಕಾನೂನಿನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಬರೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !