ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡು ದಿನಗಳ ಭಾರತ ಪ್ರವಾಸದಲ್ಲಿ ಪ್ರಧಾನಿ ಮೋದಿ ಭೇಟಿ ಹಾಗೂ ಮಾತುಕತೆ, ರಾಷ್ಟ್ರಪತಿ ಭೇಟಿ,ಇಂಡೋ ರಷ್ಯಾ ಬ್ಯೂಸಿನೆಸ್ ಫೋರಂನಲ್ಲಿ ಭಾಷಣ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದಾರೆ. ಇದೀಗ ವ್ಲಾದಿಮಿರ್ ಪುಟಿನ್‌ಗೆ ವಿಶೇಷ ಔತಣಕೂಟ ಆಯೋಜಿಸಲಾಗಿದೆ.
ಇದಕ್ಕಾಗಿ ಹಲವು ಕೇಂದ್ರ ಸಚಿವರಿಗೆ ಆಹ್ವಾನ ನೀಡಲಾಗಿದೆ. ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರಿಗೆ ಆಮಂತ್ರಣ ನೀಡಿಲ್ಲ. ಇದೇ ವೇಳೆ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್‌ಗೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಇದು ಕಾಂಗ್ರೆಸ್ ಕಣ್ಣು ಕಂಪಾಗಿಸಿದೆ.
ಭಾರತಕ್ಕೆ ಭೇಟಿ ನೀಡುವ ವಿಶ್ವನಾಯಕರ ಜೊತೆ ವಿಪಕ್ಷಗಳ ನಾಯಕರು, ವಿರೋಧ ಪಕ್ಷ ನಾಯಕರು ಭೇಟಿ ಮಾಡುತ್ತಿದ್ದರು. ಆದರೆ ಈ ಬಾರಿ ಮೋದಿ ಹಾಗೂ ಬಿಜೆಪಿ ಸರ್ಕಾರ ಆಹ್ವಾನ ನೀಡದೆ ವಿಪಕ್ಷ ನಾಯಕರನ್ನು ದೂರವಿಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಂಬಿತ್ ಪಾತ್ರ, ವಿರೋಧಿ ನಾಯಕರೊಂದಿಗೆ ವಿದೇಶಿ ಅತಿಥಿಗಳ ಸಭೆಗಳಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಹೇಳಿದರು.
ದಿಮಿರ್ ಪುಟಿನ್ ಭಾರತ ಭೇಟಿಯಲ್ಲಿ ಕೆಲ ಪ್ರೊಟೋಕಾಲ್‌ಗಳಿವೆ. ಇದನ್ನು ವಿಪಕ್ಷ ನಾಯಕರು ಮರೆತಿದ್ದಾರೆ. ಭಾರತಕ್ಕೆ ಭೇಟಿ ನೀಡಿದವರು ಯಾವುದೇ ದೇಶದ ವಿದೇಶಾಂಗ ಸಚಿವರಲ್ಲ ಎಂದಿದ್ದಾರೆ. ಇದೇ ವೇಳೆ ಸರ್ಕಾರ ನೀಡಿದ ಹಲವು ಕಾರ್ಯಕ್ರಮಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದಾರೆ. ಇದೀಗ ಪುಟಿನ್ ಔತಣಕೂಟಕ್ಕೆ ಆಹ್ವಾನವಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಅಣಕಿಸಿದ್ದಾರೆ.

