ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಅವರು ಬಹಿರಂಗವಾಗಿ ಬಿಜೆಪಿ ಹಾಗೂ ಅದರ ಮಾರ್ಗದರ್ಶಕ ಸಂಸ್ಥೆಯಾದ ಆರ್ ಎಸ್ ಎಸ್ ಹೊಗಳಿರುವುದು ಕಾಂಗ್ರೆಸ್ ಗೆ ನುಂಗಲಾರದ ತುಪ್ಪದಂತೆ ಆಗಿದೆ.
ಕಾಂಗ್ರೆಸ್ ಹೈಕಮಾಂಡ್ನ ಕೆಂಗಣ್ಣಿಗೆ ಗುರಿಯಾದ ದಿಗ್ವಿಜಯ ಸಿಂಗ್ ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮುಖಾಮುಖಿಯಾಗಿ ಭೇಟಿಯಾದರು.
ಮೂಲಗಳ ಪ್ರಕಾರ, ರಾಹುಲ್ ಗಾಂಧಿ ದಿಗ್ವಿಜಯ ಸಿಂಗ್ ಅವರೊಂದಿಗೆ ಕೈಕುಲುಕುತ್ತಾ, “ನೀವು ನಿನ್ನೆ ಕಿಡಿಗೇಡಿತನ ಮಾಡಿದ್ದೀರಿ” ಎಂದು ತಮಾಷೆಯಾಗಿ ಹೇಳಿದ್ದಾರೆ. ಇದು ದಿಗ್ವಿಜಯ ಸಿಂಗ್ ಸುತ್ತಲೂ ನಿಂತಿದ್ದ ನಾಯಕರಲ್ಲಿ ನಗು ಮೂಡಿಸಿತು.
ಶನಿವಾರ ದಿಗ್ವಿಜಯ ಸಿಂಗ್ ಅವರು ಆರ್‌ಎಸ್‌ಎಸ್-ಬಿಜೆಪಿ ಮೈತ್ರಿಕೂಟವನ್ನು ಶ್ಲಾಘಿಸಿದ್ದರು. ಎಲ್.ಕೆ ಅಡ್ವಾಣಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಫೋಟೋವನ್ನು ಪೋಸ್ಟ್ ಮಾಡಿದ್ದ ದಿಗ್ವಿಜಯ ಸಿಂಗ್ ಸಾಮಾನ್ಯ ಕಾರ್ಯಕರ್ತ ಉನ್ನತ ಹುದ್ದೆಗೇರಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
‘ನಾನು ಈ ಫೋಟೋವನ್ನು ಗಮನಿಸಿದೆ. ಇದು ತುಂಬಾ ಪ್ರಭಾವಶಾಲಿ ಫೋಟೋ. ಒಬ್ಬ ತಳಮಟ್ಟದ ಆರ್‌ಎಸ್‌ಎಸ್ ಸ್ವಯಂಸೇವಕ ಮತ್ತು ಜನಸಂಘ, ಬಿಜೆಪಿ ಕಾರ್ಯಕರ್ತ ತನ್ನ ಪಕ್ಷದ ನಾಯಕರ ಪಾದಗಳ ಕೆಳಗೆ ನೆಲದ ಮೇಲೆ ಕುಳಿತು ಹೇಗೆ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಯಾದರು ಎಂಬುದನ್ನು ನಾವು ಗಮನಿಸಬೇಕು. ಇದು ಸಂಘಟನೆಯ ಶಕ್ತಿ. ಜೈ ಸೀತಾ ರಾಮ್’ ಎಂದು ದಿಗ್ವಿಜಯ ಸಿಂಗ್ ಪೋಸ್ಟ್ ಮಾಡಿದ್ದರು.

