January14, 2026
Wednesday, January 14, 2026
spot_img

ರಾಹುಲ್‌ ಶತಕ ವ್ಯರ್ಥ, ಮಿಚೆಲ್ ಆಟಕ್ಕೆ ಮಂಕಾದ ಬೌಲರ್ಸ್: ನ್ಯೂಜಿಲ್ಯಾಂಡ್ ಗೆ ಗೆಲುವಿನ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ 7 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿದೆ.

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 284 ರನ್ ಗಳಿಸಿತು. ಭಾರತ ನೀಡಿದ್ದ 285 ರನ್‌ಗಳ ಗುರಿಯನ್ನು ಕಿವೀಸ್ ಪಡೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.

285 ರನ್​ಗಳ ಗುರಿಯನ್ನ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ನಿಧಾನಗತಿ ಆರಂಭ ಪಡೆದುಕೊಂಡಿತು. ಕೇವಲ 22 ರನ್​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಡಿವೋನ್ ಕಾನ್ವೆ 21 ಎಸೆತಗಳಲ್ಲಿ 16 ರನ್​ಗಳಿಸಿ ಹರ್ಷಿತ್​ ರಾಣಾ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಮತ್ತೊಬ್ಬ ಆರಂಭಿಕ ಹೆನ್ರಿ ನಿಕೋಲ್ಸ್ ಕೂಡ ಕೇವಲ 10 ರನ್​ಗಳಿಸಿ ಪ್ರಸಿದ್ಧ್​ ಕೃಷ್ಣಾಗೆ ವಿಕೆಟ್ ಒಪ್ಪಿಸಿದರು.

ಆದರೆ 3ನೇ ವಿಕೆಟ್​ಗೆ ಒಂದಾದ ವಿಲ್ ಯಂಗ್ ಹಾಗೂ ಡ್ಯಾರಿಲ್ ಮಿಚೆಲ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟುತ್ತಾ ಭಾರತದಿಂದ ಗೆಲುವನ್ನ ಕಸಿದುಕೊಂಡರು. ಈ ಜೋಡಿ 3ನೇ ವಿಕೆಟ್​ಗೆ 162 ರನ್​ಗಳ ಮ್ಯಾಚ್​ ವಿನ್ನಿಂಗ್ ಜೊತೆಯಾಟ ನೀಡಿದರು.

ಯಂಗ್ 98 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 87 ರನ್​ಗಳಿಸಿದರು. ನಂತರ 5ನೇ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್ ಮಿಚೆಲ್ ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ ಅಜೇಯ 78 ರನ್​ಗಳ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಫಿಲಿಫ್ಸ್ 25 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 32 ರನ್​ಗಳಿಸಿದರು.

ಕಳೆದ ಪಂದ್ಯದಲ್ಲಿ 84 ರನ್​ ಸಿಡಿಸಿದ್ದ ಮಿಚೆಲ್ ಈ ಪಂದ್ಯದಲ್ಲೂ ಅದೇ ಫಾರ್ಮ್ ಮುಂದುವರಿಸಿ ಅಜೇಯ ಶತಕ ಸಿಡಿಸಿದರು. 117 ಎಸೆತಗಳನ್ನೆದುರಿಸಿದ ಮಿಚೆಲ್ 11 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 131 ರನ್​ಗಳಿಸಿದರು.

Most Read

error: Content is protected !!