ಹೊಸದಿಗಂತ ಡಿಜಿಟಲ್ ಡೆಸ್ಕ್:
2025-26ರ ಸಾಲಿನ ರಣಜಿ ಟ್ರೋಫಿಯ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಾಖಂಡ ವಿರುದ್ಧ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇಲ್ಲಿನ ಏಕನಾ ಕ್ರಿಕೆಟ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ ತಂಡವು ಬೌಲಿಂಗ್ ಆಯ್ದುಕೊಂಡಿತು.
ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಆರಂಭದಲ್ಲೇ ಅಘಾತ ಎದುರಾಯಿತು. ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 5 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಈ ಹಂತದಲ್ಲಿ ಒಂದಾದ ನಾಯಕ ದೇವದತ್ ಪಡಿಕ್ಕಲ್ ಮತ್ತು ಕೆ.ಎಲ್. ರಾಹುಲ್ ಜೋಡಿ ಉತ್ತರಾಖಂಡ ಬೌಲರ್‌ಗಳನ್ನು ಬೆಂಡೆತ್ತಿತು. ಜವಾಬ್ದಾರಿಯುತ ಆಟವಾಡಿದ ಈ ಜೋಡಿ 200ಕ್ಕೂ ಅಧಿಕ ರನ್‌ಗಳ ಅಮೋಘ ಜೊತೆಯಾಟವಾಡುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದಿತು.
ಟೀಮ್ ಇಂಡಿಯಾ ತಾರೆ ಕೆ.ಎಲ್. ರಾಹುಲ್ ತಮ್ಮ ಫಾರ್ಮ್ ಅನ್ನು ಮುಂದುವರಿಸಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25ನೇ ಶತಕ ಪೂರೈಸಿದರು. ಕೇವಲ 153 ಎಸೆತಗಳಲ್ಲಿ ಶತಕದ ಗಡಿ ದಾಟಿದ ಅವರು, ಅಂತಿಮವಾಗಿ 211 ಎಸೆತಗಳಲ್ಲಿ 141 ರನ್ (11 ಬೌಂಡರಿ, 5 ಸಿಕ್ಸರ್) ಬಾರಿಸಿ ಮಿಂಚಿದರು. ಇದು ರಣಜಿ ಟ್ರೋಫಿಯಲ್ಲಿ ಅವರಿಗೆ ಸತತ ಎರಡನೇ ಶತಕವಾಗಿದೆ.
ಸದ್ಯ ಕರ್ನಾಟಕ ತಂಡವು ಬೃಹತ್ ಮೊತ್ತದತ್ತ ಹೆಜ್ಜೆ ಹಾಕುತ್ತಿದ್ದು, ಉತ್ತರಾಖಂಡದ ಬೌಲರ್‌ಗಳು ರಾಹುಲ್-ಪಡಿಕ್ಕಲ್ ಜೋಡಿಯನ್ನು ಕಟ್ಟಿಹಾಕಲು ಹರಸಾಹಸ ಪಟ್ಟರು.



