ಹೊಸದಿಗಂತ ವರದಿ, ಗದಗ:
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎರಡು ಪ್ರತ್ಯೇಕ ಅಡ್ಡೆಗಳ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಇಬ್ಬರು ಆರೋಪಿಗಳ ಜೊತೆಗೆ 31,050 ರೂ. ಮೌಲ್ಯದ 13.80 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಬೆಟಗೇರಿ ವಸಂತಸಿoಗ್ ಜಮಾದಾರ್ ಕಾಲೋನಿಯ ಚೇತನ ಪ್ರಕಾಶ ಭಜಂತ್ರಿ ಹಾಗೂ ಮಂಜುನಾಥ ನಗರದ ಅಹ್ಮದ ಮಹ್ಮದಸಾಬ ಯಲಿಗಾರ ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ.
ಇಬ್ಬರು ಆರೋಪಿಗಳು ಆಟೋ ಡ್ರೈವರ್ ಗಳಾಗಿದ್ದು, ಪಡಿತರದಾರರಿಂದ ಕಡಿಮೆ ಹಣಕ್ಕೆ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ಇಲಾಖೆ ಆಹಾರ ನಿರೀಕ್ಷ ನಾಗನಗೌಡ ಚಿನ್ನಪ್ಪಗೌಡ್ರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಟಗೇರಿ ವಸಂತಸಿoಗ್ ಜಮಾದಾರ್ ಕಾಲೋನಿಯ ಚೇತನ ಪ್ರಕಾಶ ಭಜಂತ್ರಿ ಎಂಬುವವರು ಬೆಟಗೇರಿಯ ಇಂದಿರಾ ಕ್ಯಾಂಟಿನ್ ಹತ್ತಿರದ ಮನೆಯಲ್ಲಿ 17,100 ರೂ. ಮೌಲ್ಯದ 7.60 ಕ್ವಿಂಟಲ್ ಅಕ್ಕಿಯನ್ನು ದಾಸ್ತಾನು ಮಾಡಿದ್ದನು. ಇನ್ನೊಬ್ಬ ಆರೋಪಿ ಅಹ್ಮದ ಮಹ್ಮದಸಾಬ ಯಲಿಗಾರ ಮಂಜುನಾಥ ನಗರದಲ್ಲಿರುವ ತನ್ನ ಮನೆಯಲ್ಲಿ 13,950 ರೂ. ಮೌಲ್ಯದ 6.20 ಕ್ವಿಂಟಲ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದನು.