ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ದೇಶಾದ್ಯಂತ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವ ಕಾಣಿಸಿಕೊಂಡಿದ್ದು, ಇದರ ಬೆನ್ನಿಗೇ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ಗೃಹ ಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ವಾಣಿಜ್ಯ ಉದ್ದೇಶಗಳಿಗೆ ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಿಗೇ, ರಾಜ್ಯಾದ್ಯಂತ 316 ಇಂತಹಾ ಪ್ರಕರಣ ಪತ್ತೆಹಚ್ಚಿರುವ ಅಧಿಕಾರಿಗಳು ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಲಿಂಡರ್ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿರುವ ಹಿನ್ನೆಲೆಯಲ್ಲಿ, ಕಮರ್ಷಿಯಲ್ ಸಿಲಿಂಡರ್ಗಳು ಈಗ ಕಾಳಸಂತೆಯಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅತ್ತ ಪೂರೈಕೆ ಇಲ್ಲ, ಇತ್ತ ದುಪ್ಪಟ್ಟು ದರದಿಂದಾಗಿ ಹೊಟೇಲ್ ಸೇರಿದಂತೆ ಸಣ್ಣಪುಟ್ಟ ಆಹಾರೋದ್ಯಮಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದು, ಪರಿಹಾರೋಪಾಯವಾಗಿ ಕೆಲವೆಡೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗಳನ್ನು ಬಳಸಲು ಮುಂದಾಗಿದ್ದಾರೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶನಿವಾರ ಮತ್ತೆ ಎಚ್ಚರಿಕೆ ನೀಡಿದ್ದು, ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.



