ಹೊಸದಿಗಂತ ಡಿಜಿಟಲ್ ಡೆಸ್ಕ್:
“ನಾನು ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಕಂಡವನು. ಸೋತಾಗಲೂ ಜನರ ಸೇವೆ ಮಾಡುವುದನ್ನು ಬಿಟ್ಟಿಲ್ಲ. ನನ್ನ ಕೊನೆಯ ಉಸಿರಿರುವವರೆಗೂ ರಾಜಕೀಯದಲ್ಲಿಯೇ ಇದ್ದು ನಿಮ್ಮ ಸೇವೆ ಮಾಡುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.
ತಮ್ಮ ತವರು ಜಿಲ್ಲೆಯ ವರಕೂಡು ಗ್ರಾಮದಲ್ಲಿ ನೆಲೆಸಿರುವ ಶ್ರೀ ಬೀರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಆಡಳಿತಾತ್ಮಕ ಒತ್ತಡದಿಂದಾಗಿ ಕ್ಷೇತ್ರಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡ ಸಿಎಂ, “ನನ್ನ ಅನುಪಸ್ಥಿತಿಯಲ್ಲಿ ಮಗ ಯತೀಂದ್ರ ಇಲ್ಲಿಗೆ ಬರುತ್ತಾನೆ. ರಾಜಕೀಯವಾಗಿ ನನ್ನನ್ನು ಹೇಗೆ ಬೆಳೆಸಿದ್ದೀರೋ, ಅದೇ ರೀತಿ ಯತೀಂದ್ರನನ್ನೂ ಬೆಳೆಸಿ ಮತ್ತು ಹರಸಿ” ಎಂದು ಕ್ಷೇತ್ರದ ಜನರಲ್ಲಿ ಭಾವುಕರಾಗಿ ಮನವಿ ಮಾಡಿದರು.
ಮುಖ್ಯಮಂತ್ರಿಗಳ ಭೇಟಿಯಿಂದ ಹರ್ಷಗೊಂಡ ಗ್ರಾಮಸ್ಥರು ಅವರಿಗೆ ಅತ್ಯಂತ ಅದ್ಧೂರಿಯಾಗಿ ಸ್ವಾಗತ ಕೋರಿದರು. ಜೆಸಿಬಿ ಮೂಲಕ ಸೇಬಿನ ಹಾರ ಹಾಕಿ, ಹೂಮಳೆ ಸುರಿಸುವ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.



