Monday, December 29, 2025

ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ ರಾಜ್ ಬಿ. ಶೆಟ್ಟಿ: ‘ರಕ್ಕಸಪುರದೋಳ್’ ಟೀಸರ್ ರಿಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟ ರಾಜ್ ಬಿ. ಶೆಟ್ಟಿ ಅವರು ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. 2025ರಲ್ಲಿ ಅವರು ‘ಸು ಫ್ರಮ್ ಸೋ’ ಸಿನಿಮಾದಿಂದ ಭರ್ಜರಿ ಗೆಲವು ಕಂಡರು. ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘45’ ಸಿನಿಮಾದಲ್ಲಿ ಕೂಡ ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರದ ಝಲಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕೌತುಕ ಡಬಲ್ ಆಗಿದೆ.

ನಿರ್ದೇಶಕ ‘ಜೋಗಿ’ ಪ್ರೇಮ್ ಶಿಷ್ಯ ರವಿ ಸಾರಂಗ ಅವರು ‘ರಕ್ಕಸಪುರದೋಳ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುತ್ತವೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು. ಆ ಥೀಮ್​​ನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಒಟ್ಟಾರೆ ಸಿನಿಮಾ ಹೇಗಿರಲಿದೆ ಎಂಬುದರ ಝಜಲ್ ಈ ಟೀಸರ್​ನಲ್ಲಿ ಕಾಣಿಸಿದೆ.

‘ರಕ್ಕಸಪುರದೋಳ್’ ಸಿನಿಮಾ 2026ರ ಫೆಬ್ರವರಿ 6ರಂದು ಬಿಡುಗಡೆ ಆಗಲಿದೆ. ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಈ ಸಿನಿಮಾದ ಮೂಲಕ ರಾಜ್ ಬಿ. ಶೆಟ್ಟಿ ಅವರಿಗೆ ಮತ್ತೊಂದು ಹಿಟ್ ಗ್ಯಾರಂಟಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ದಟ್ಟ ಕಾನನ, ಮಾಟ ಮಂತ್ರ, ಸರಣಿ ಸಾವು ಮುಂತಾದ ಅಂಶಗಳು ಈ ಟೀಸರ್​ನಲ್ಲಿ ಹೈಲೈಟ್ ಆಗಿವೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿದ್ದಾರೆ.

error: Content is protected !!