Monday, November 17, 2025

ಹಿಂದು ದೇವರ ಬಗ್ಗೆ ರಾಜಮೌಳಿ ಟೀಕೆ: ನೆಟ್ಟಿಗರು ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹೇಶ್ ಬಾಬು–ರಾಜಮೌಳಿ ಚಿತ್ರದ ‘ವಾರಾಣಸಿ’ ಟೈಟಲ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರ್ಜರಿಯಾಗಿ ರಿವೀಲ್ ಆಯಿತು. ಆದರೆ ಟೈಟಲ್ ಪ್ರದರ್ಶನದ ವೇಳೆಯಲ್ಲಿ ಸ್ಕ್ರೀನ್‌ಗೆ ತಾಂತ್ರಿಕ ದೋಷ ಬಂದು ಈವೆಂಟ್ ಕೆಲವು ಕ್ಷಣ ತಡವಾಯಿತು. ನಂತರ ಟೀಸರ್ ಬಿಡುಗಡೆ ಮಾಡಿದ ರಾಜಮೌಳಿ ವೇದಿಕೆ ಮೇಲೆ ಅಭಿಮಾನಿಗಳ ಬಳಿ ಕ್ಷಮೆ ಕೇಳಿದರು.

ಈ ವೇಳೆ ಅವರು ಹನುಮಂತನ ಕುರಿತು ಆಡಿದ ಮಾತುಗಳು ವಿವಾದಕ್ಕೆ ಕಾರಣವಾದವು. “ನನಗೆ ದೇವರ ಮೇಲೆ ಅಂತಹ ನಂಬಿಕೆ ಏನೂ ಇಲ್ಲ. ಹನುಮಂತನ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ನನ್ನ ತಂದೆ ವಿಜಯೇಂದ್ರ ಪ್ರಸಾದ್ ಹೇಳಿದ್ರು. ಆದರೆ ಈ ತಾಂತ್ರಿಕ ತೊಂದರೆ ಆಗುತ್ತಿದ್ದಂತೆ ನನಗೆ ಸಿಟ್ಟೇ ಬಂತು. ಹೀಗೆ ಇದ್ದಾಗ ಅವನು ನನಗೆ ಯಾವ ರೀತಿ ಸಹಾಯ ಮಾಡ್ತಾನೆ? ನೋಡೋಣ” ಎಂಬ ರಾಜಮೌಳಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಅಷ್ಟೇ ಅಲ್ಲದೆ, ತಮ್ಮ ಪತ್ನಿಯ ಭಕ್ತಿಯನ್ನು ಉಲ್ಲೇಖಿಸಿ, “ನನ್ನ ಪತ್ನಿ ಹನುಮಂತನ ದೊಡ್ಡ ಭಕ್ತೆ. ಅವಳು ಹನುಮಂತನೊಂದಿಗೆ ಗೆಳೆಯನಂತೆ ಮಾತನಾಡುತ್ತಾ ಇರುತ್ತಾಳೆ. ಈ ಸಮಸ್ಯೆ ಆಗುತ್ತಿದ್ದಾಗ ನನಗೆ ಅವಳ ಮೇಲೂ ಕೋಪ ಬಂತು. ‘ನಿನ್ನ ಹನುಮಂತ ಈ ಬಾರಿ ಸಹಾಯ ಮಾಡ್ತಾನಾ ನೋಡೋಣ’ ಅನ್ನಿಸಿತು” ಎಂದು ರಾಜಮೌಳಿ ಹೇಳಿದರು.

ಈ ಹೇಳಿಕೆಗಳು ಹೊರಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಹೆಚ್ಚಿದವು. ಅನೇಕರು ರಾಜಮೌಳಿ ತಾಂತ್ರಿಕ ದೋಷಕ್ಕೆ ದೇವರನ್ನು ಕಾರಣ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. “ಇಂತಹ ದೊಡ್ಡ ಈವೆಂಟ್‌ಗಿಂತ ಮೊದಲೇ ತಾಂತ್ರಿಕ ಪರಿಶೀಲನೆ ಮಾಡಬೇಕು, ಅದನ್ನು ದೇವರ ಹೆಸರಿನಲ್ಲಿ ಮುಟ್ಟಿಸುವುದು ತಪ್ಪು” ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

error: Content is protected !!