Tuesday, October 21, 2025

ಅ. 31 ರಂದು ಮೇಲುಕೋಟೆ ಆರಾಧ್ಯದೈವ ಚೆಲುವನಾರಾಯಣಸ್ವಾಮಿಗೆ ರಾಜಮುಡಿ ಉತ್ಸವ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯದುಗಿರಿಯ ಆರಾಧ್ಯದೈವ ಶ್ರೀಚೆಲುವನಾರಾಯಣಸ್ವಾಮಿಗೆ ಈ ವರ್ಷ ಬಹುಶತಮಾನಗಳ ನಂತರ ಎರಡು ಪ್ರಮುಖ ಉತ್ಸವಗಳು ಒಂದೇ ದಿನ ನಡೆಯಲಿವೆ. ಬೆಳಗ್ಗೆ ನಡೆಯುವ ಅಷ್ಟ ತೀರ್ಥೋತ್ಸವ ಹಾಗೂ ರಾತ್ರಿ ನಡೆಯುವ ರಾಜಮುಡಿ ಉತ್ಸವ ಭಕ್ತರಪಾಲಿಗೆ ಅತ್ಯಂತ ಪವಿತ್ರವಾಗಿದೆ.

ಮಾಹಿತಿಯ ಪ್ರಕಾರ ಈ ಬಾರಿ ಮೈಸೂರು ಮಹಾರಾಜರು ಶ್ರೀಚೆಲುವನಾರಾಯಣಸ್ವಾಮಿಗೆ ಸಮರ್ಪಿಸಿದ ಸಿಂಹಲಾಂಚನವು ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ರಾಜಲಾಂಛನ ಗಂಡುಬೇರುಂಡ ಪದಕ, ಹನ್ನೆರಡು ಹರಳುಗಳನ್ನು ಒಳಗೊಂಡ ಪದ್ಮಪೀಠ, ಶಂಕು, ಚಕ್ರ, ಗದೆ, ಶಿರಶ್ಚಕ್ರ, ಅಭಯಹಸ್ತ, ಪಾದಜೋಡಿ, ಕರ್ಣಕುಂಡಲ ಸೇರಿದಂತೆ 16 ಬಗೆಯ ಐತಿಹಾಸಿಕ ವಜ್ರ, ಪಚ್ಚೆ, ರತ್ನ ಮತ್ತು ಮುತ್ತುಗಳಿಂದ ಕೂಡಿದ ಆಭರಣಗಳನ್ನು ತೊಡಿಸಲಾಗುತ್ತದೆ.

ಸಾಮಾನ್ಯವಾಗಿ, ಪ್ರತಿವರ್ಷ ರಾಜಮುಡಿ ಉತ್ಸವ ಮತ್ತು ಅಷ್ಟ ತೀರ್ಥೋತ್ಸವ ವಿಭಿನ್ನ ದಿನಗಳಲ್ಲಿ ನಡೆಯುತ್ತಿದ್ದು, ಈ ಬಾರಿ ನಕ್ಷತ್ರ ಸಂಯೋಗದ ಕಾರಣ ಎರಡೂ ಉತ್ಸವಗಳು ಒಂದೇ ದಿನ ಅಂದರೆ ಅಕ್ಟೋಬರ್ 31ರಂದು ನಡೆಯುತ್ತಿರುವುದು ವಿಶಿಷ್ಟವಾಗಿದೆ. ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವ ಅಕ್ಟೋಬರ್ 26ರಂದು ಅಂಕುರಾರ್ಪಣೆಯಿಂದ ಪ್ರಾರಂಭವಾಗಿ ನವೆಂಬರ್ 5ರವರೆಗೆ 10 ದಿನಗಳ ಕಾಲ ನಡೆಯಲಿದೆ. 600 ವರ್ಷಗಳಿಂದ ಯದುಗಿರಿಯ ಮೈಸೂರು ಅರಸರ ಕುಲದೈವ ಚೆಲುವನಾರಾಯಣಸ್ವಾಮಿಗೆ ರಾಜಮುಡಿ ಬ್ರಹ್ಮೋತ್ಸವ ನಿರಂತರವಾಗಿ ನಡೆಯುತ್ತಿದ್ದು, ಈ ಐತಿಹಾಸಿಕ ಪರಂಪರೆಯನ್ನು ಭಕ್ತರು ಅತ್ಯಂತ ಗೌರವದಿಂದ ಪಾಲಿಸುತ್ತಿದ್ದಾರೆ.

ಈ ಬಾರಿ ತಮಿಳುನಾಡು ಸರ್ಕಾರದ ಧಾರ್ಮಿಕ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಕಾಂಚೀಪುರಂ ವಿಭಾಗದ ಜಂಟಿ ಆಯುಕ್ತರು ಹಾಗೂ ಅರಣ್ಯಸ್ಥ ಅಧಿಕಾರಿ ವಿದ್ವಾಂಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

error: Content is protected !!