ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಜನೀಕಾಂತ್ ಸದಾ ಪ್ರೋತ್ಸಾಹ ನೀಡುವ ಕಾರ್ಯವನ್ನೂಮಾಡುತ್ತಲೇ ಇರುತ್ತಾರೆ. ತಮಗೆ ಹಿಡಿಸಿದ ವ್ಯಕ್ತಿ, ವಿಷಯದ ಬಗ್ಗೆ ಬಹಿರಂಗವಾಗಿ ಹೇಳಿ ಅವರ ಮೌಲ್ಯ ಹೆಚ್ಚು ಮಾಡುತ್ತಾರೆ. ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗ ಸಿನಿಮಾ ನೋಡಿ ಮೆಚ್ಚಿ, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿ, ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿ, ಸನ್ಮಾನ ಮಾಡಿದ್ದರು . ಇದೀಗ ಬೀದಿ ಬದಿ ವ್ಯಾಪಾರಿಯೊಬ್ಬರನ್ನು ಅವರ ಕುಟುಂಬ ಸಮೇತ ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ ರಜನೀಕಾಂತ್.
ರಜನೀಕಾಂತ್ ಅವರು ಶೇಖರ್ ಹೆಸರಿನ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಮನೆಗೆ ಕರೆಸಿದ್ದರು. ಶೇಖರ್ ಮಾತ್ರವೇ ಅಲ್ಲದೆ ಅವರ ಕುಟುಂಬದವರನ್ನೆಲ್ಲ ಮನೆಗೆ ಕರೆಸಿದ್ದ ರಜನೀಕಾಂತ್, ತಮ್ಮ ಮನೆಯಲ್ಲೇ ಅವರಿಗೆಲ್ಲ ಆತಿಥ್ಯ ನೀಡಿದರು ಮಾತ್ರವಲ್ಲದೆ ಶೇಖರ್ ಅವರ ಕೊರಳಿಗೆ ಚಿನ್ನದ ಸರ ಹಾಕಿ ಬಳಿಕ ಅವರಿಗೆ ತಮ್ಮಿಷ್ಟ ಗುರುವಿನ ಚಿತ್ರವನ್ನು ನೀಡಿ ಸನ್ಮಾನ ಸಹ ಮಾಡಿದರು.
ಇದೆಲ್ಲ ರಜನೀಕಾಂತ್ ಮಾಡಿದ್ದೇಕೆ? ಯಾಕೆಂದರೆ, ಶೇಖರ್ ಮಾಡುತ್ತಿರುವ ಅಪರೂಪದ ಕಾರ್ಯ. ಮಧುರೈನಲ್ಲಿ ರಸ್ತೆ ಬದಿ ಸಣ್ಣ ಹೊಟೇಲ್ ನಡೆಸುತ್ತಿರುವ ಶೇಖರ್, ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ರಸ್ತೆ ಬದಿ ಹೊಟೇಲ್ ಗಳಲ್ಲಿಯೇ ಒಂದು ಪರೋಟಕ್ಕೆ 30ರಿಂದ 50 ರೂಪಾಯಿ ಬೆಲೆ ಇದೆ ಹಾಗಿರುವಾಗ ಶೇಖರ್ ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ.
ರಜನೀಕಾಂತ್ ಅಭಿಮಾನಿ ಆಗಿರುವ ಶೇಖರ್ 15 ವರ್ಷಗಳ ಹಿಂದೆ ರಜನೀಕಾಂತ್ ಹುಟ್ಟುಹಬ್ಬದ ಪ್ರಯುಕ್ತ ಐದು ರೂಪಾಯಿಗೆ ಪರೋಟ ಮಾರಾಟ ಮಾರಲು ಪ್ರಾರಂಭಿಸಿದರು, ಅಂದಿನಿಂದ ಇಂದಿನವರೆಗೂ ಅದೇ ಬೆಲೆಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ರಜನೀಕಾಂತ್ ಅಪ್ಪಟ ಅಭಿಮಾನಿ ಆಗಿರುವ ಅವರು, ತಮ್ಮ ಪುಟ್ಟ ಹೋಟೆಲ್ ನಲ್ಲೆಲ್ಲ ರಜನೀಕಾಂತ್ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಕೈಯ ಮೇಲೆ ರಜನೀಕಾಂತ್ ಚಿತ್ರದ ಹಚ್ಚೆಯನ್ನೂ ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ರಜನೀಕಾಂತ್ ಅವರು ಶೇಖರ್ ಅವರನ್ನು ಅವರ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಅವರು ಮಾಡುತ್ತಿರುವ ಸೇವೆಗೆ ಧನ್ಯವಾದ ತಿಳಿಸಿದ್ದಲ್ಲದೆ, ಅವರಿಗೆ ಚಿನ್ನದ ಚೈನು ನೀಡಿ, ಹಣ ಸಹ ನೀಡಿ ಆಶೀರ್ವಾದ ಮಾಡಿದ್ದಾರೆ.
ಶೇಖರ್ ಅವರಿಗೆ ರಜನೀಕಾಂತ್ ಸನ್ಮಾನಿಸುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.




