ಹೊಸದಿಗಂತ ಡಿಜಿಟಲ್ ಡೆಸ್ಕ್:
ಹನುಮ ಜಯಂತಿಯ ವಿಶೇಷ ಸಂದರ್ಭದಲ್ಲಿ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿ ಸಿನಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ನಿರ್ದೇಶಕ ನಿತೀಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಆಗಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಿ ಈಗಾಗಲೇ ಗಮನ ಸೆಳೆದಿದೆ.
ಸುಮಾರು 2 ನಿಮಿಷ 38 ಸೆಕೆಂಡ್ ಅವಧಿಯ ಈ ಟೀಸರ್‌ನಲ್ಲಿ ಶ್ರೀರಾಮನ ಪಾತ್ರವನ್ನು ಕೇಂದ್ರಬಿಂದುವಾಗಿಯೇ ತೆರೆದಿಡಲಾಗಿದೆ. ಬಾಲಕಾಂಡದಿಂದ ಅರಣ್ಯಕಾಂಡದವರೆಗೆ ಸಾಗುವ ಕೆಲವು ಪ್ರಮುಖ ಕ್ಷಣಗಳನ್ನು ದೃಶ್ಯ ರೂಪದಲ್ಲಿ ತೋರಿಸಲಾಗಿದ್ದು, ವನವಾಸ ಮತ್ತು ಅರಣ್ಯದ ಸಾಹಸ ದೃಶ್ಯಗಳು ವಿಶೇಷ ಗಮನ ಸೆಳೆಯುತ್ತವೆ. ಅತ್ಯಾಧುನಿಕ VFX ಮತ್ತು ತಾಂತ್ರಿಕ ಸ್ಪರ್ಶದಿಂದ ಪ್ರತಿಯೊಂದು ಫ್ರೇಮ್‌ಗೂ ಅದ್ಧೂರಿತನ ನೀಡಲಾಗಿದೆ.
ಇದನ್ನೂ ಓದಿ:
ರಣಬೀರ್ ಕಪೂರ್ ಶ್ರೀರಾಮನಾಗಿ ಅತ್ಯಂತ ಭವ್ಯವಾಗಿ ಕಾಣಿಸಿಕೊಂಡಿದ್ದು, ಅವರ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟೀಸರ್‌ನ ಕೊನೆಯಲ್ಲಿ ಯಶ್ ಅವರ ರಾವಣ ಪಾತ್ರದ ಝಲಕ್ ಮಾತ್ರ ತೋರಿಸಲಾಗಿದ್ದು, ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಸೀತೆ ಮತ್ತು ಲಕ್ಷ್ಮಣನ ಪಾತ್ರಗಳನ್ನು ಇನ್ನೂ ಗುಪ್ತವಾಗಿಯೇ ಇಡಲಾಗಿದೆ.
ಚಿತ್ರದ ಮೊದಲ ಭಾಗ ಈ ವರ್ಷದ ದೀಪಾವಳಿಗೆ, ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಚಿತ್ರತಂಡ ನೀಡಿದೆ.



