ಹೊಸದಿಗಂತ ವರದಿ ಶಿವಮೊಗ್ಗ:
ನಗರದ ನವುಲೆಯ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 25 ರಿಂದ ಕರ್ನಾಟಕ ಮತ್ತು ಗೋವಾ ತಂಡಗಳು ನಡುವೆ ರಣಐ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ಶಿವಮೊಗ್ಗ ವಲಯದ ಮಾಜಿ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಆರುಣ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗಾಗಲೇ ನಗರಕ್ಕೆ ಎರಡೂ ತಂಡಗಳು ಆಗಮಿಸಿವೆ. ಮಳೆ ಬಿಡುವು ನೀಡುವ ವಿಶ್ವಾಸ ಇದೆ. ಉತ್ತಮ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ವೀಕ್ಷಿಸಬಹುದಾಗಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರ್ನಾಟಕ ತಂಡದಲ್ಲಿ ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್ ರಂತಹ ಪ್ರಖ್ಯಾತ ಆಟಗಾರರು ಇದ್ದಾರೆ. ಗೋವಾ ತಂಡ ಕೂಡ ಅತ್ಯುತ್ತಮ ಸಂಯೋಜನೆಯಿಂದ ಕೂಡಿದೆ. ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಆಡುತ್ತಿದ್ದಾರೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಐದು ವರ್ಷಗಳ ಹಿಂದೆ ರಣಜಿ ಪಂದ್ಯ ನಡೆದಿತ್ತು. ಮಧ್ಯಪ್ರದೇಶ ಮತ್ತು ಕರ್ನಾಟಕ ತಂಡಗಳು ನಡುವೆ ಪಂದ್ಯ ನಡೆದಿದ್ದು ಕೊನೆಯದಾಗಿದೆ. ಅದಾದ ನಂತರ ಈಗ ಅವಕಾಶ ಲಭಿಸಿದೆ. ಶಾಲಾ ಮಕ್ಕಳು, ವಿವಿಧ ಕ್ರಿಕೆಟ್ ಕ್ಲಬ್‌ಗಳ ಸದಸ್ಯರು ಪಂದ್ಯವನ್ನು ವೀಕ್ಷಿಸುವಂತೆ ಮನವಿ ಮಾಡಿದ ಅವರು, ಹಲವು ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಕೊಡಲು ಮನವಿ ಮಾಡಲಾಗಿದೆ. ಇದರಿಂದ ಮಕ್ಕಳು ಕ್ರಿಕೆಟ್ ಕಲಿಯಲು ಅನುಕೂಲ ಆಗಲಿದೆ ಎಂದರು.
ಕೆಎಸ್‌ಸಿಎ ಶಿವಮೊಗ್ಗ ವಲಯಾಧ್ಯಕ್ಷ ರಾಜೇಂದ್ರ ಕಾಮತ್, ವಲಯ ಸಂಚಾಲಕ ಸದಾನಂದ, ಮಾಜಿ ವಲಯ ಸಂಚಾಲಕ ಡಿ.ಆರ್.ನಾಗರಾಜ್, ಮನೋಹರ್ ಇನ್ನಿತರರು ಇದ್ದರು.
ಶಿವಮೊಗ್ಗದಲ್ಲಿ ಗೋವಾ-ಕರ್ನಾಟಕ ಮಧ್ಯೆ ರಣಜಿ ಕ್ರಿಕೆಟ್: ಅರುಣ್

