ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರ ರಣಜಿ ಟ್ರೋಫಿ ಇಂದು ಆರಂಭಗೊಂಡಿದ್ದು, ಎಲ್ಲ ಕ್ರಿಕೆಟ್ ಅಭಿಮಾನಿಗಳ ಕಣ್ಣು ಬಿಹಾರ ತಂಡದತ್ತ ನೆಟ್ಟಿತ್ತು. ಅದರಲ್ಲೂ 14 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದರು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದ್ದ ವೈಭವ್ ಅವರನ್ನು ಬಿಹಾರ ತಂಡದ ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಆದರೆ, ಅರುಣಾಚಲ ಪ್ರದೇಶ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ವೈಭವ್ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಆಕ್ರಮಣಕಾರಿ ಆರಂಭ, ನಿರಾಶಾದಾಯಕ ಅಂತ್ಯ
ಬಿಹಾರದ ಇನ್ನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ತಮ್ಮ ಖ್ಯಾತಿಗೆ ತಕ್ಕಂತೆ ಭರ್ಜರಿಯಾಗಿ ಬ್ಯಾಟಿಂಗ್ ಆರಂಭಿಸಿದರು. ಮೊದಲ ನಾಲ್ಕು ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ ಒಟ್ಟು 14 ರನ್ ಗಳಿಸಿ, 280 ರ ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದರು. ಆದರೆ, ಸುದೀರ್ಘ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಗತ್ಯವಿರುವ ತಾಳ್ಮೆಯನ್ನು ಕಳೆದುಕೊಂಡ ವೈಭವ್, T20 ಶೈಲಿಯಲ್ಲಿ ಆಡಲು ಯತ್ನಿಸಿ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ವೈಭವ್‌ಗೆ ದುಃಸ್ವಪ್ನವಾದ ಪಾಟ್ನಾದ ಮೊಯಿನುಲ್ ಹಕ್ ಕ್ರೀಡಾಂಗಣ
ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಈ ಪಂದ್ಯವು ಪಾಟ್ನಾದ ಮೊಯಿನುಲ್ ಹಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಮೈದಾನವು ವೈಭವ್‌ಗೆ ಅದೃಷ್ಟದ ತಾಣವಾಗಿ ಉಳಿದಿಲ್ಲ. ಈ ಪಂದ್ಯಕ್ಕೂ ಮೊದಲು, ಇಲ್ಲಿ ಆಡಿದ ನಾಲ್ಕು ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 31 ರನ್ ಗಳಿಸಿದ್ದರು ಮತ್ತು ಎರಡು ಇನ್ನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಈ ಪಂದ್ಯದ 14 ರನ್‌ಗಳನ್ನು ಸೇರಿಸಿದರೆ, ಮೊಯಿನುಲ್ ಹಕ್ ಕ್ರೀಡಾಂಗಣದಲ್ಲಿ ವೈಭವ್ ಸೂರ್ಯವಂಶಿ ಒಟ್ಟು 5 ಇನ್ನಿಂಗ್ಸ್‌ಗಳಿಂದ ಕೇವಲ 45 ರನ್‌ಗಳನ್ನಷ್ಟೇ ಗಳಿಸಿದಂತಾಗಿದೆ.
ಮೇಲುಗೈ ಸಾಧಿಸಿದ ಬಿಹಾರ ತಂಡ
ಪಂದ್ಯದ ಒಟ್ಟಾರೆ ಪ್ರದರ್ಶನದತ್ತ ಗಮನಹರಿಸಿದರೆ, ಬಿಹಾರ ತಂಡವು ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ಮೊದಲು ಬೌಲಿಂಗ್ ಮಾಡಿದ ಬಿಹಾರ, ಅರುಣಾಚಲ ಪ್ರದೇಶ ತಂಡವನ್ನು ಕೇವಲ 105 ರನ್‌ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಬಿಹಾರ, ಆರಂಭಿಕ ಆಘಾತದಿಂದ ಬೇಗನೆ ಚೇತರಿಸಿಕೊಂಡಿತು. ಈ ಸುದ್ದಿ ಬರೆಯುವ ವೇಳೆಗೆ ಬಿಹಾರ ತಂಡವು 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಬೃಹತ್ ಮುನ್ನಡೆಯತ್ತ ಸಾಗುತ್ತಿದ್ದು, ತಂಡದ ಪರ ಆಯುಷ್ ಆನಂದ್ ಲೋಹರುಕ ಅವರು ಅಮೋಘ ಶತಕ ಸಿಡಿಸಿ ಕ್ರೀಸ್‌ನಲ್ಲಿದ್ದಾರೆ.