ಹೊಸದಿಗಂತ ವರದಿ ಮಡಿಕೇರಿ:
ಅಪ್ರಾಪ್ತೆಗೆ ಗರ್ಭ ಕರುಣಿಸಿದ ಬಸ್ ಕ್ಲೀನರ್ ಒಬ್ಬನಿಗೆ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪೋಕ್ಸೋ ಕಾಯ್ದೆ ಅಡಿಯಲ್ಲಿ 20ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಮೂರ್ನಾಡು ವೆಂಕಟೇಶ್ವರ ಕಾಲೋನಿಯ ಶ್ರೀನಿವಾಸ್ ಎಂಬವರ ಲೈನ್’ಮನೆಯಲ್ಲಿ ವಾಸವಿದ್ದ ಪ್ರಸ್ತುತ ಮೈಸೂರಿನ ಉದಯಗಿರಿಯ ಕಲ್ಯಾಣಗಿರಿ ಮಾರಿಕಾಂಬಾ ದೇವಾಲಯ ಸನಿಹ ವಾಸವಿರುವ ದಿ. ರಾಘವ ಎಂಬವರ ಪುತ್ರ ಹೆಚ್.ಆರ್. ಮನೋಜ್ (26) ಎಂಬಾತನೇ ಶಿಕ್ಷೆಗೆ ಗುರಿಯಾದವನಾಗಿದ್ದಾನೆ.
ವೀರಾಜಪೇಟೆಯ ಖಾಸಗಿ ಬಸ್ ಒಂದರಲ್ಲಿ ಕ್ಲೀನರ್ ಆಗಿದ್ದ ಮನೋಜ್, ಬಿಂದು ಎಮಭಾಕೆಯನ್ನು ವಿವಾಹವಾಗಿ ಮೂರ್ನಾಡಿನಲ್ಲಿ ನೆಲೆಸಿದ್ದ. ಖಾಸಗಿ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭ (2019ರಲ್ಲಿ), ಮೂರ್ನಾಡು ವೀರಾಜಪೇಟೆ ನಡುವೆ ಪ್ರತಿನಿತ್ಯ ಶಾಲೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಮಾತನಾಡುತ್ತಾ ಸಲುಗೆ ಬೆಳೆಸಿಕೊಂಡಿದ್ದ. ಇದು ಮುಂದೆ ಪ್ರಣಯಕ್ಕೆ ತಿರುಗಿದ್ದು, 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಆರೋಪಿಯು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ.
ಬಳಿಕ ಬಾಲಕಿ ವಾಸವಿದ್ದ ಲೈನ್’ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಮನೋಜ್, ‘ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಕೆಯ ನಾಟಕವಾಗಿ ಎರಡು ಮೂರು ಬಾರಿ ಆತ್ಯಾಚಾರ ಎಸಗಿದ್ದ. ಪರಿಣಾಮ ಬಾಲಕಿ ಗರ್ಭ ಧರಿಸಿದ್ದರೂ, ಮನೆ ಮಂದಿಗೆ ತಿಳಿಯದಾಗಿತ್ತು. ಕೊನೆಗೆ 2019ರ ಡಿ.21ರಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಸಾರ್ವಜನಿಕರ ಮೂಲಕ ದೊರೆತ ಮಾಹಿತಿ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು, 2020ರ ಜ.8ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮನೋಜ್ ವಿರುದ್ಧ 376 ಐ.ಪಿ.ಸಿ.4,6 ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ ವೀರಾಜಪೇಟೆ ವೃತ್ತ ನಿರೀಕ್ಷಕರು ಆರೋಪಿಯನ್ನು ಬಂಧಿಸಿ 2020ರ ಫೆ..12ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ನಟರಾಜು ಅವರು ಆರೋಪಿ ವಿರುದ್ಧದ ಆರೋಪ ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಅಪರಾಧಿಗೆ ಕಲಂ 06 ಪೋಕ್ಸೋ ಕಾಯ್ದೆ ರೆ/ವಿ 376(2) ಐ.ಪಿ.ಸಿ. ಕಾಯ್ದೆಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25,000 ರೂ ದಂಡ ವಿಧಿಸಿದ್ದಾರೆ.
ಅಲ್ಲದೆ ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ಅವರು ಸರ್ಕಾರದ ಪರ ವಾದ ಮಂಡಿಸಿದರು.


