March 14, 2026
Saturday, March 14, 2026
spot_img

ರೇಷನ್ ಕಾರ್ಡ್ ಆಯ್ತು, ಈಗ ರೇಷನ್ ಕರೆನ್ಸಿ ಸರದಿ! ‘ಡಿಜಿಟಲ್ ಆಹಾರ ಕೂಪನ್’ ಯುಗಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಹೆಚ್ಚಿಸಲು ಸಂಕಲ್ಪ ಮಾಡಿರುವ ಕೇಂದ್ರ ಸರ್ಕಾರ, ಈಗ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಅವರ ದೂರದೃಷ್ಟಿಯ ಫಲವಾಗಿ, ದೇಶದಲ್ಲೇ ಮೊದಲ ಬಾರಿಗೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಆಧಾರಿತ “ಡಿಜಿಟಲ್ ಆಹಾರ ಕೂಪನ್” ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಲಾಗಿದೆ.

ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವ ಪ್ರಹ್ಲಾದ್‌ ಜೋಶಿ ಅವರು ಈ ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಈ ಹಿಂದೆ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಮೂಲಕ ಪಡಿತರ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ್ದ ಸರ್ಕಾರ, ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ಡಿಜಿಟಲ್ ಕರೆನ್ಸಿಯನ್ನು ಈ ವಲಯಕ್ಕೆ ತಂದಿದೆ. ಇದರ ಪ್ರಮುಖ ಅಂಶಗಳು ಇಲ್ಲಿವೆ:

ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ವಿಳಂಬವಿಲ್ಲದೆ ತಕ್ಷಣವೇ ಕಮಿಷನ್ ಮೊತ್ತ ಜಮೆಯಾಗಲಿದೆ.

ಫಲಾನುಭವಿಗಳು ಡಿಜಿಟಲ್ ಕೂಪನ್ ಬಳಸಿ ಕ್ಷಣಾರ್ಧದಲ್ಲಿ ತಮ್ಮ ಪಾಲಿನ ರೇಷನ್ ಪಡೆದುಕೊಳ್ಳಬಹುದು.

ಡಿಜಿಟಲ್ ಕರೆನ್ಸಿ ಬಳಕೆಯಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಪ್ರತಿಯೊಂದು ಪೈಸೆಯೂ ಪಾರದರ್ಶಕವಾಗಿ ಬಳಕೆಯಾಗಲಿದೆ.

ಈ ವಿನೂತನ ಯೋಜನೆಯು ಪ್ರಾಯೋಗಿಕವಾಗಿ ಮೊದಲು ಗುಜರಾತ್‌ನಲ್ಲಿ ಆರಂಭವಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಣೆಯಾಗುವ ನಿರೀಕ್ಷೆಯಿದೆ.

ಕಳೆದ ಕೆಲವು ವರ್ಷಗಳಿಂದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಸಮಗ್ರ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಾ ಬಂದಿದ್ದು, ಈ ‘ಡಿಜಿಟಲ್ ಆಹಾರ ಕರೆನ್ಸಿ’ಯು ಸಾಮಾಜಿಕ ವಲಯದ ಯೋಜನೆಗಳಲ್ಲಿ ಡಿಜಿಟಲ್ ಹಣವನ್ನು ಬಳಸುವ ಭಾರತದ ಮೊದಲ ಬೃಹತ್ ಪ್ರಯತ್ನವಾಗಿ ಗುರುತಿಸಿಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !