Sunday, September 28, 2025

FOOD | ಫಾಟಾಫಟ್ ಅಂತ ರೆಡಿ ಆಗುತ್ತೆ ರವಾ ಉತ್ತಪ್ಪ! ನೀವೂ ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರ ಅಥವಾ ಸಂಜೆ ತಿಂಡಿಗೆ ತುಂಬಾ ರುಚಿಕರ ಮತ್ತು ಬೇಗನೆ ತಯಾರಿಸಬಹುದಾದ ತಿಂಡಿ ರವಾ ಉತ್ತಪ್ಪ. ಇದರಲ್ಲಿ ರವೆ ಮತ್ತು ಮೊಸರು ಇರೋದ್ರಿಂದ ಇದು ಪೌಷ್ಟಿಕಾಂಶಯುಕ್ತವಾಗಿದ್ದು, ತರಕಾರಿಗಳನ್ನು ಸೇರಿಸಿದರೆ ಇನ್ನಷ್ಟು ರುಚಿ ಬರುತ್ತೆ.

ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ – 1 ಕಪ್
ಮೊಸರು – ½ ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – 10 ಎಲೆ
ಸೋಡಾ ಪೌಡರ್ – ಒಂದು ಚಿಟಿಕೆ
ಹಸಿರು ಮೆಣಸಿನಕಾಯಿ – 2 (ಹೆಚ್ಚಿದವು)
ಅಚ್ಚಖಾರದ ಪುಡಿ – ½ ಚಮಚ
ಈರುಳ್ಳಿ – 1 (ಹೆಚ್ಚಿದವು)
ಟೊಮೆಟೊ – 1 (ಹೆಚ್ಚಿದವು)
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಒಂದು ಬೌಲ್‌ಗೆ ರವೆ ಹಾಕಿ, ಅದಕ್ಕೆ ಮೊಸರು, ಸೋಡಾ ಪೌಡರ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಈಗ ಅದಕ್ಕೆ ಅರ್ಧ ಕಪ್ ನೀರು ಸೇರಿಸಿ. ಹಿಟ್ಟು ತುಂಬಾ ದಪ್ಪವಾಗಿದ್ದರೆ ಸ್ವಲ್ಪ ಹೆಚ್ಚುವರಿ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿ. ಮಿಶ್ರಣವನ್ನು ಅರ್ಧ ಗಂಟೆ ಬಿಟ್ಟು ಬಿಡಿ. ತುರ್ತು ಇದ್ದರೆ 10 ನಿಮಿಷ ಬಿಟ್ಟರೂ ಸಾಕು.

ಬಳಿಕ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಹಸಿಮೆಣಸಿನಕಾಯಿ, ಕರಿಬೇವು, ಅಚ್ಚಖಾರದ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಈಗ ಸ್ಟವ್ ಮೇಲೆ ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ. ಹಿಟ್ಟು ದೋಸೆಯ ಹಾಯಿಸುವಂತೆ ಹಾಯಿಸಿ. 3-4 ನಿಮಿಷ ಬೇಯಿಸಿ, ನಂತರ ತಿರುಗಿಸಿ ಇನ್ನೂ 2 ನಿಮಿಷ ಬೇಯಿಸಿ. ಬೇಯುವಾಗ ಸ್ವಲ್ಪ ಎಣ್ಣೆ ಹಾಕಿದರೆ ಕ್ರಿಸ್ಪಿಯಾಗಿ ಬರುತ್ತದೆ.