Wednesday, September 24, 2025

ಬಿಗ್‌ಬ್ಯಾಶ್ ಲೀಗ್‌ಗೆ ರವಿಚಂದ್ರನ್ ಅಶ್ವಿನ್ ರೆಡಿ: ಅಧಿಕೃತ ಘೋಷಣೆಯೊಂದೇ ಬಾಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ಗೆ ವಿದಾಯ ಹೇಳಿದ ನಂತರವೂ ತಮ್ಮ ಕ್ರಿಕೆಟ್‌ ಪ್ರೇಮವನ್ನು ಮುಂದುವರಿಸಲು ನಿರ್ಧರಿಸಿರುವ ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇದೀಗ ಜಾಗತಿಕ ಟಿ20 ಲೀಗ್ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಮುಂಬರುವ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಅಶ್ವಿನ್ ಆಡಲಿರುವ ಸಾಧ್ಯತೆಗಳು ದಟ್ಟವಾಗಿವೆ.

39 ವರ್ಷದ ಅಶ್ವಿನ್, ಬಿಗ್‌ಬ್ಯಾಶ್‌ನಲ್ಲಿ ಸಿಡ್ನಿ ಥಂಡರ್ಸ್ ಪರ ಕಣಕ್ಕಿಳಿಯುವ ನಿರೀಕ್ಷೆ ವ್ಯಕ್ತವಾಗಿದೆ. ಅಧಿಕೃತ ಘೋಷಣೆ ಬಾಕಿ ಇದ್ದರೂ, ‘ಫಾಕ್ಸ್ ಸ್ಪೋರ್ಟ್ಸ್’ ವರದಿ ಪ್ರಕಾರ ಅಶ್ವಿನ್ ಅವರ ಸೇರುವಿಕೆ ಬಹುತೇಕ ಖಚಿತವಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಟೋಡ್ ಗ್ರೀನ್‌ಬರ್ಗ್ ಇತ್ತೀಚೆಗೆ ಅಶ್ವಿನ್ ಅವರನ್ನು ಭೇಟಿಯಾಗಿ ಬಿಗ್‌ಬ್ಯಾಶ್‌ನಲ್ಲಿ ಪಾಲ್ಗೊಳ್ಳಲು ಮನವೊಲಿಸಿರುವ ಮಾಹಿತಿ ಇದ್ದು. ಇದರಿಂದ ಅಶ್ವಿನ್ ಅವರ ಜಾಗತಿಕ ಲೀಗ್ ಪ್ರವೇಶಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಅಶ್ವಿನ್ ಈಗಾಗಲೇ ಯುಎಇಯಲ್ಲಿ ನಡೆಯಲಿರುವ ILT20 ಲೀಗ್ ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ. ಜನವರಿ 4ರಂದು ಆ ಟೂರ್ನಿ ಮುಗಿಯಲಿದ್ದು, ಡಿಸೆಂಬರ್ 14ರಿಂದ ಪ್ರಾರಂಭವಾಗಿ ಜನವರಿ 18ರವರೆಗೆ ಬಿಗ್‌ಬ್ಯಾಶ್ ನಡೆಯಲಿದೆ. ಹೀಗಾಗಿ, ಬಿಗ್‌ಬ್ಯಾಶ್‌ನ ದ್ವಿತಿಯಾರ್ಧದಲ್ಲಿ ಅಶ್ವಿನ್ ಆಡುವ ಸಾಧ್ಯತೆ ಇದೆ.

ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಸಕ್ರಿಯ ಆಟಗಾರರಿಗೆ ಅವಕಾಶ ನೀಡುವುದಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಟಗಾರರು ಮಾತ್ರ ವಿದೇಶಿ ಲೀಗ್‌ನಲ್ಲಿ ಭಾಗವಹಿಸಬಹುದು. ಈ ಹಿನ್ನೆಲೆಯಲ್ಲಿ ಅಶ್ವಿನ್ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ.

ಇದನ್ನೂ ಓದಿ