January19, 2026
Monday, January 19, 2026
spot_img

ರವಿಚಂದ್ರನ್ ಅಶ್ವಿನ್ ಹೊಸ ಪಯಣ: ವಿದೇಶಿ ಟಿ20 ಲೀಗ್‌ಗೆ ಸಜ್ಜಾದ ದಿಗ್ಗಜ ಸ್ಪಿನ್ನರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್, ನಿವೃತ್ತಿಯ ನಂತರವೂ ಕ್ರಿಕೆಟ್‌ನಿಂದ ದೂರವಾಗಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ ಕೆಲವೇ ದಿನಗಳಲ್ಲಿ ಅವರು ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಮುಂದಾಗಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಇಂಟರ್‌ನ್ಯಾಷನಲ್ ಲೀಗ್ ಟಿ20 (ಐಎಲ್‌ಟಿ20) ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿರುವ ಅಶ್ವಿನ್, ಹೊಸ ಹಾದಿಗೆ ಕಾಲಿಡಲು ಸಜ್ಜಾಗಿದ್ದಾರೆ.

38 ವರ್ಷದ ಅಶ್ವಿನ್, ಡಿಸೆಂಬರ್ 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮತ್ತು 2025ರ ಆಗಸ್ಟ್‌ನಲ್ಲಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ್ದರು. ಐಪಿಎಲ್‌ನಲ್ಲಿ 17 ವರ್ಷಗಳ ವೃತ್ತಿಜೀವನದಲ್ಲಿ 221 ಪಂದ್ಯಗಳಲ್ಲಿ 187 ವಿಕೆಟ್ ಪಡೆದ ಅವರು, ಈ ಟೂರ್ನಮೆಂಟ್‌ನ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ 2010 ಮತ್ತು 2011ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿದ್ದಾರೆ. ರೈಸಿಂಗ್ ಪುಣೆ ಸೂಪರ್‌ಜೈಂಟ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರವೂ ಆಡಿದ್ದಾರೆ.

ಸೆಪ್ಟೆಂಬರ್ 30, 2025ರಂದು ದುಬೈನಲ್ಲಿ ನಡೆಯಲಿರುವ ಐಎಲ್‌ಟಿ20 ಹರಾಜಿನಲ್ಲಿ ಅಶ್ವಿನ್‌ರ ಹೆಸರು ಗಮನ ಸೆಳೆಯಲಿದೆ. ಈ ಲೀಗ್‌ನಲ್ಲಿ ಆರು ತಂಡಗಳಿದ್ದು, ಹೆಚ್ಚಿನವು ಭಾರತೀಯ ಮಾಲೀಕರ ತಂಡಗಳಾಗಿವೆ. ಡಿಸೆಂಬರ್ 2, 2025ರಿಂದ ಜನವರಿ 4, 2026ರವರೆಗೆ ನಡೆಯುವ ಈ ಆವೃತ್ತಿಯಲ್ಲಿ ಅಶ್ವಿನ್‌ರನ್ನು ಪಡೆಯಲು ಕೆಲವು ತಂಡಗಳು ಈಗಾಗಲೇ ಆಸಕ್ತಿ ತೋರಿವೆ.

ಅಶ್ವಿನ್ ಆಯ್ಕೆಯಾದರೆ, ರಾಬಿನ್ ಉತ್ತಪ್ಪ, ಯೂಸುಫ್ ಪಠಾಣ್ ಮತ್ತು ಅಂಬಾಟಿ ರಾಯುಡು ನಂತರ ಈ ಲೀಗ್‌ನಲ್ಲಿ ಆಡುವ ನಾಲ್ಕನೇ ಭಾರತೀಯ ಆಟಗಾರರಾಗಲಿದ್ದಾರೆ. ತಮ್ಮ ಅನುಭವವನ್ನು ಆಟಗಾರ-ಕೋಚ್‌ ಆಗಿ ಹಂಚಿಕೊಳ್ಳುವ ಆಸಕ್ತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಅಶ್ವಿನ್‌ರ ನಿವೃತ್ತಿ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟವಾದರೂ, ಅವರ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸುವ ನಿರ್ಧಾರ ಅಭಿಮಾನಿಗಳಿಗೆ ಹೊಸ ಕುತೂಹಲ ಮೂಡಿಸಿದೆ.

Must Read