ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಎರಡನೇ ಹಂತಕ್ಕೆ ಇಂದಿನಿಂದ ಗುಜರಾತ್‌ನ ವಡೋದರಾದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಹಂತದ 11 ಪಂದ್ಯಗಳಲ್ಲಿ ಅಬ್ಬರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಮುನ್ನುಗ್ಗುತ್ತಿದೆ. ಇದೀಗ ತನ್ನ ಐದನೇ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ.
ವಡೋದರಾದಲ್ಲಿ ನಡೆಯುತ್ತಿರುವ ಈ 12ನೇ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ನಾಯಕಿ ಆಶ್ಲೀಗ್ ಗಾರ್ಡ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಮೈದಾನದಲ್ಲಿ ಇಬ್ಬನಿಯ ಪ್ರಭಾವ ಇರುವುದರಿಂದ ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಸುಲಭವಾಗಲಿದೆ ಎಂಬ ಲೆಕ್ಕಾಚಾರ ಗುಜರಾತ್ ತಂಡದ್ದು. ಹೀಗಾಗಿ ಸ್ಮೃತಿ ಮಂಧಾನ ನೇತೃತ್ವದ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡುವ ಸವಾಲು ಪಡೆದಿದೆ.
ಈ ಪಂದ್ಯವು ಕುತೂಹಲ ಕೆರಳಿಸಲು ಮುಖ್ಯ ಕಾರಣವೆಂದರೆ ಗುಜರಾತ್ ಜೈಂಟ್ಸ್ ತಂಡದಲ್ಲಿರುವ ಆರ್ಸಿಬಿಯ ನಾಲ್ವರು ಮಾಜಿ ಆಟಗಾರ್ತಿಯರು. ತಮ್ಮ ಹಳೆಯ ತಂಡದ ವಿರುದ್ಧವೇ ತಂತ್ರ ರೂಪಿಸಿರುವ ಈ ಆಟಗಾರ್ತಿಯರನ್ನು ಎದುರಿಸಿ ಗೆಲುವಿನ ಓಟ ಮುಂದುವರಿಸುವುದು ಬೆಂಗಳೂರು ತಂಡದ ಇರಾದೆಯಾಗಿದೆ.
ಆರ್ಸಿಬಿ ತಂಡವು ತನ್ನ ಗೆಲುವಿನ ಲಯವನ್ನು ಉಳಿಸಿಕೊಳ್ಳಲು ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಗುಜರಾತ್ ಜೈಂಟ್ಸ್ ತಂಡವು ಕಳೆದ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದೆ.


