ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಐಪಿಎಲ್ ಪಂದ್ಯಾವಳಿ ಈಗಷ್ಟೇ ರಂಗೇರಲಾರಂಭಿಸಿದೆ. ಎಲ್ಲಾ 10 ತಂಡಗಳು ತಮ್ಮ ಮೊದಲ ಪಂದ್ಯವನ್ನು ಮುಗಿಸಿ ಎರಡನೇ ಹಂತಕ್ಕೆ ಕಾಲಿಡುತ್ತಿವೆ. ಇಂದಿನಿಂದ ಎರಡನೇ ಸುತ್ತಿನ ಹಣಾಹಣಿಗಳು ಆರಂಭವಾಗುತ್ತಿದ್ದು, ಹಲವು ಸ್ಟಾರ್ ಆಟಗಾರರು ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ತಂಡದ ಸ್ಟಾರ್ ವೇಗಿ ನುವಾನ್ ತುಷಾರ ಈ ಬಾರಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
ಕಳೆದ ಹರಾಜಿನಲ್ಲಿ ಆರ್‌ಸಿಬಿ ತಂಡವು 1.6 ಕೋಟಿ ರೂಪಾಯಿ ನೀಡಿ ಶ್ರೀಲಂಕಾದ ಈ ‘ಮಲಿಂಗಾ ಶೈಲಿ’ಯ ಬೌಲರ್‌ನನ್ನು ಖರೀದಿಸಿತ್ತು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿ ನಡೆಸಿದ ಫಿಟ್‌ನೆಸ್ ಪರೀಕ್ಷೆಯಲ್ಲಿ ತುಷಾರ ಉತ್ತೀರ್ಣರಾಗಿಲ್ಲ ಎಂಬ ಕಾರಣ ನೀಡಿ, ಅವರಿಗೆ ಐಪಿಎಲ್ ಆಡಲು ಬೇಕಾದ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದೆ. ಮಂಡಳಿಯ ನಿಯಮದಂತೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಮಾತ್ರ ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿರುತ್ತದೆ.
ಮಂಡಳಿಯ ಈ ನಿರ್ಧಾರದಿಂದ ಕೆರಳಿರುವ ನುವಾನ್ ತುಷಾರ, ಈಗ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. “ನನ್ನ ಕೇಂದ್ರ ಒಪ್ಪಂದವು ಮಾರ್ಚ್ 31ಕ್ಕೆ ಮುಕ್ತಾಯಗೊಂಡಿದೆ. ಅಲ್ಲದೆ ಹೊಸ ಒಪ್ಪಂದದಲ್ಲಿ ನನ್ನನ್ನು ಪರಿಗಣಿಸಬೇಡಿ ಎಂದು ನಾನೇ ಮನವಿ ಮಾಡಿದ್ದೇನೆ. ಆದರೂ ಮಂಡಳಿಯು ವಿನಾಕಾರಣ ಫಿಟ್‌ನೆಸ್ ನೆಪವೊಡ್ಡಿ ನನಗೆ ಎನ್‌ಒಸಿ ನೀಡುತ್ತಿಲ್ಲ. ಇದರಿಂದ ನನಗೆ 1.6 ಕೋಟಿ ರೂಪಾಯಿ ನಷ್ಟವಾಗುತ್ತಿದೆ,” ಎಂದು ತುಷಾರ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಆರ್‌ಸಿಬಿ ಪಾಳಯ ಸೇರಬೇಕಿದ್ದ ತುಷಾರ ಲಂಕಾದಲ್ಲೇ ಉಳಿದಿದ್ದು, ಈ ಕಾನೂನು ಹೋರಾಟ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.



