ಹೊಸದಿಗಂತ ಡಿಜಿಟಲ್ ಡೆಸ್ಕ್:
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾದಿ ಈಗ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಆರಂಭದ ಐದು ಪಂದ್ಯಗಳಲ್ಲಿ ಅಶ್ವಮೇಧ ಕುದುರೆಯಂತೆ ಮುನ್ನುಗ್ಗಿ ಇತಿಹಾಸ ಬರೆದಿದ್ದ ಆರ್ಸಿಬಿ, ಇದೀಗ ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್‌ಗಳ ಸೋಲನುಭವಿಸಿದ್ದ ಬೆಂಗಳೂರು ತಂಡ, ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್‌ಗಳ ಅಂತರದಿಂದ ಮುಗ್ಗರಿಸಿದೆ. ಈ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದಿದ್ದರೂ ತಂಡ ಸುಲಭವಾಗಿ ಫೈನಲ್ ತಲುಪಬಹುದಿತ್ತು. ಆದರೆ ಈ ಬ್ಯಾಕ್ ಟು ಬ್ಯಾಕ್ ಸೋಲುಗಳು ಆರ್ಸಿಬಿಯ ನೇರ ಫೈನಲ್ ಪ್ರವೇಶಕ್ಕೆ ದೊಡ್ಡ ಅಡ್ಡಿಯಾಗಿವೆ.
ಸದ್ಯ 10 ಅಂಕಗಳನ್ನು ಹೊಂದಿರುವ ಆರ್ಸಿಬಿಗೆ ಜನವರಿ 29 ರಂದು ನಡೆಯಲಿರುವ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯ ಅತ್ಯಂತ ನಿರ್ಣಾಯಕ.
ಗೆದ್ದರೆ ಆರ್ಸಿಬಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ, ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈ ಮೂಲಕ ಎಲಿಮಿನೇಟರ್ ಪಂದ್ಯವಾಡುವ ಒತ್ತಡದಿಂದ ಮುಕ್ತಿ ಪಡೆಯಬಹುದು.
ಒಂದು ವೇಳೆ ಈ ಪಂದ್ಯದಲ್ಲೂ ಸೋತರೆ, ಫೈನಲ್ ಹಾದಿ ಕಠಿಣವಾಗಲಿದೆ. ಇತರ ತಂಡಗಳಿಗೂ 10 ಅಂಕ ಗಳಿಸುವ ಅವಕಾಶವಿರುವುದರಿಂದ, ನೆಟ್ ರನ್ ರೇಟ್ ಆಧಾರದ ಮೇಲೆ ಅಗ್ರಸ್ಥಾನಿಯನ್ನು ನಿರ್ಧರಿಸಲಾಗುತ್ತದೆ. ಇದು ಆರ್ಸಿಬಿಯನ್ನು ಸಂಕಷ್ಟಕ್ಕೆ ದೂಡಬಹುದು.
ಒಟ್ಟಿನಲ್ಲಿ, ಅಭಿಮಾನಿಗಳ ನೆಚ್ಚಿನ ಆರ್ಸಿಬಿ ತಂಡವು ಎಲಿಮಿನೇಟರ್ ರಿಸ್ಕ್ ಇಲ್ಲದೆ ಫೈನಲ್ ತಲುಪಬೇಕಾದರೆ, ಕೊನೆಯ ಲೀಗ್ ಪಂದ್ಯದಲ್ಲಿ ಜಯದ ಹಳಿಗೆ ಮರಳಲೇಬೇಕಿದೆ.



